ದಾವಣಗೆರೆ: ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ.
ದಾವಣಗೆರೆ ಕಡೆಯಿಂದ ಯೂಸುಫ್ ಖಾನ್ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಚನ್ನಗಿರಿ ಕಡೆಯಿಂದ ಅಣ್ಣಪ್ಪ ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡೂ ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯೂಸುಫ್ ಖಾನ್ ಅವರ ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಮಗುವಿಗೆ ಔಷಧಿ ತರಲು ಅವರು ಬೈಕ್‌ನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಔಷಧಿ ತೆಗೆದುಕೊಂಡು ವಾಪಸ್ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.



