ನ್ಯೂಯಾರ್ಕ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ನ್ಯಾಯಾಲಯ 19 ವರ್ಷ 7 ತಿಂಗಳ (235 ತಿಂಗಳು) ಜೈಲು ಶಿಕ್ಷೆ ವಿಧಿಸಿದೆ. ಹತ್ಯೆಗೆ ಸುಪಾರಿ ನೀಡುವ ಸಂಚು, ಹತ್ಯೆಗೆ ಸಂಚು ಹಾಗೂ ಅಕ್ರಮ ಹಣ ವರ್ಗಾವಣೆ ಸಂಚು ಸೇರಿದಂತೆ ವಿವಿಧ ಆರೋಪಗಳನ್ನು ನಿಖಿಲ್ ಗುಪ್ತಾ ಈ ವರ್ಷದ ಆರಂಭದಲ್ಲಿ ಒಪ್ಪಿಕೊಂಡಿದ್ದರು.
ನ್ಯೂಯಾರ್ಕ್ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯದ ನ್ಯಾಯಾಧೀಶ ವಿಕ್ಟರ್ ಮರೆರೊ ಅವರು ಶುಕ್ರವಾರ ಸುಮಾರು 80 ನಿಮಿಷಗಳ ವಿಚಾರಣೆ ಬಳಿಕ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಭಾರತೀಯ ಕಾನೂನಿನ ಅಡಿಯಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಘೋಷಿತ ಭಯೋತ್ಪಾದಕನಾಗಿದ್ದು, ಆತ ಮುನ್ನಡೆಸುತ್ತಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಭಾರತೀಯ ಮೂಲದ ವಕೀಲ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ನಿಖಿಲ್ ಗುಪ್ತಾ ಶಿಕ್ಷೆಗೆ ಗುರಿಯಾಗಿದ್ದಾರೆ.
ವಿಚಾರಣೆ ವೇಳೆ ಪನ್ನುನ್ ಹೇಳಿದ್ದೇನು?
ನ್ಯಾಯಾಲಯದ ವಿಚಾರಣೆ ವೇಳೆ ಗುರುಪತ್ವಂತ್ ಸಿಂಗ್ ಪನ್ನುನ್ ತಮ್ಮ ಜೀವಕ್ಕೆ ಬೆದರಿಕೆ ಎದುರಾದ ಬಳಿಕ ಕಳೆದ 1,200ಕ್ಕೂ ಹೆಚ್ಚು ದಿನಗಳಿಂದ ತಮ್ಮ ದೈನಂದಿನ ವಕೀಲ ವೃತ್ತಿಯನ್ನು ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ, ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ನಿಖಿಲ್ ಗುಪ್ತಾ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿಚಾರಣೆಗೆ ಮುನ್ನ ನ್ಯೂಯಾರ್ಕ್ ನ್ಯಾಯಾಲಯದ ಹೊರಗೆ ಪನ್ನುನ್ ಬೆಂಬಲಿಗರು ಗುಪ್ತಾ ಹಾಗೂ ಇತರರ ಪ್ರತಿಕೃತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.
ಅಮೆರಿಕದ ಪ್ರಾಸಿಕ್ಯೂಟರ್ಗಳ ಆರೋಪವೇನು?
ಅಮೆರಿಕದ ಪ್ರಾಸಿಕ್ಯೂಟರ್ಗಳ ಪ್ರಕಾರ, ಅಂದಿನ ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಸ್ ಯಾದವ್ ಅವರು 2023ರ ಮೇ ತಿಂಗಳಲ್ಲಿ ಪನ್ನುನ್ ಹತ್ಯೆಗೆ ಸುಪಾರಿ ಹಂತಕನನ್ನು ನೇಮಿಸುವ ಕೆಲಸವನ್ನು ನಿಖಿಲ್ ಗುಪ್ತಾಗೆ ವಹಿಸಿದ್ದರು. ವಿಕಾಸ್ ಯಾದವ್ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW)ಗೆ ಸಂಬಂಧಿಸಿದ ಸರ್ಕಾರಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಯಾದವ್ ಸೂಚನೆಯ ಮೇರೆಗೆ ಗುಪ್ತಾ ಅಪರಾಧ ಹಿನ್ನೆಲೆಯ ವ್ಯಕ್ತಿಯೆಂದು ಭಾವಿಸಿ ಒಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ಅಮೆರಿಕದ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಜೊತೆ ಕೆಲಸ ಮಾಡುತ್ತಿದ್ದ ರಹಸ್ಯ ಮಾಹಿತಿದಾರನಾಗಿದ್ದ. ಬಳಿಕ ಆತ ಗುಪ್ತಾ ಅವರನ್ನು ಸುಪಾರಿ ಹಂತಕನ ಸೋಗಿನಲ್ಲಿದ್ದ ಡಿಇಎ ರಹಸ್ಯ ಅಧಿಕಾರಿಗೆ ಪರಿಚಯಿಸಿದ್ದನು.
ಪನ್ನುನ್ ಹತ್ಯೆಗೆ 1 ಲಕ್ಷ ಡಾಲರ್ ನೀಡಲು ಯಾದವ್ ಒಪ್ಪಿಕೊಂಡಿದ್ದರು ಎನ್ನಲಾಗಿದ್ದು, ಮುಂಗಡವಾಗಿ 15 ಸಾವಿರ ಡಾಲರ್ ಹಣವನ್ನು ನ್ಯೂಯಾರ್ಕ್ನಲ್ಲಿ ತಲುಪಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದರು. ಅಲ್ಲದೆ, ಪನ್ನುನ್ ಅವರ ಮನೆಯ ವಿಳಾಸ, ಫೋನ್ ಸಂಖ್ಯೆಗಳು, ದೈನಂದಿನ ಚಟುವಟಿಕೆಗಳ ವಿವರಗಳು ಹಾಗೂ ಕಣ್ಗಾವಲು ಫೋಟೋಗಳನ್ನು ಗುಪ್ತಾ ಹಸ್ತಾಂತರಿಸಿದ್ದರು ಎಂಬ ಆರೋಪವೂ ಇದೆ.
ಪ್ರೇಗ್ನಲ್ಲಿ ಬಂಧನ, ಅಮೆರಿಕಕ್ಕೆ ಹಸ್ತಾಂತರ
2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರೇಗ್ನಲ್ಲಿ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಬಳಿಕ 2024ರ ಜೂನ್ನಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಸ್ ಯಾದವ್ ಅಮೆರಿಕದ ವಶದಲ್ಲಿಲ್ಲ.
ಭಾರತದ ಪ್ರತಿಕ್ರಿಯೆ ಏನಿತ್ತು?
ಈ ಹತ್ಯೆ ಸಂಚಿನಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಗಳ ಪಾತ್ರವಿದೆ ಎಂಬ ಅಮೆರಿಕದ ಆರೋಪವನ್ನು ಭಾರತ ನಿರಾಕರಿಸಿತ್ತು. 2023ರ ನವೆಂಬರ್ನಲ್ಲಿ ಅಮೆರಿಕ ದೋಷಾರೋಪ ಪಟ್ಟಿಯನ್ನು ಬಹಿರಂಗಪಡಿಸಿದ ಬಳಿಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿ, ಭಾರತೀಯ ಅಧಿಕಾರಿಯೊಬ್ಬರ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಕಳವಳಕಾರಿ ವಿಷಯವಾಗಿದ್ದು, ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು. ಆರೋಪಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿತ್ತು.
2025ರ ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಹೇಳಿಕೆಯಲ್ಲಿ, ಅಪರಾಧ ಹಿನ್ನೆಲೆ ಹಾಗೂ ಸಂಪರ್ಕಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖಾ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿತ್ತು. ಆದರೆ, ಆ ವ್ಯಕ್ತಿಯ ಹೆಸರು ವಿಕಾಸ್ ಯಾದವ್ ಎಂದು ಸಚಿವಾಲಯ ಅಧಿಕೃತವಾಗಿ ಉಲ್ಲೇಖಿಸಿರಲಿಲ್ಲ.









