ಬೆಂಗಳೂರು: ಪ್ರೀತಿಸಿದ ಯುವತಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ ಎಂಬ ವಿಚಾರ ತಿಳಿದು ಯುವಕನೊಬ್ಬ ಮದುವೆ ಮಂಟಪದಲ್ಲೇ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾನು ಪ್ರೀತಿಸುತ್ತಿದ್ದ ಯುವತಿಯ ಮದುವೆ ನಡೆಯುತ್ತಿರುವ ವಿಷಯ ತಿಳಿದ ಯುವಕ, ತಡಮಾಡದೆ ನೇರವಾಗಿ ಮದುವೆ ಮಂಟಪಕ್ಕೆ ಬಂದಿದ್ದಾನೆ. ಮದುವೆ ಸಮಾರಂಭದ ನಡುವೆ ಏಕಾಏಕಿ ಪ್ರತ್ಯಕ್ಷನಾದ ಆತ, ಯುವತಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ಮದುವೆ ಮಂಟಪದಲ್ಲಿದ್ದವರು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ. ಪ್ರಿಯತಮೆಯ ಮದುವೆಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದಲೇ ಯುವಕ ಈ ರೀತಿ ವರ್ತಿಸಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕ ತೋರಿಸಿದ ಗನ್ ನಿಜವಾದದ್ದೇ ಅಥವಾ ನಕಲಿ ಗನ್ ಆಗಿತ್ತೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮದುವೆ ಮಂಟಪದಲ್ಲಿನ ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದುಬರಬೇಕಿದೆ.









