ಕಬ್ಬಿಣ ಮತ್ತು ಸ್ಟೀಲ್‌ನ ವಸ್ತುಗಳು ದೀರ್ಘಕಾಲ ಬಳಕೆಯಲ್ಲಿದ್ದಂತೆ ತುಕ್ಕು ಹಿಡಿಯುವುದು ಸಾಮಾನ್ಯ.
ಅದರಲ್ಲೂ ಮಳೆಗಾಲದಲ್ಲಿ ಮಳೆ ನೀರು, ತೇವಾಂಶ ಹಾಗೂ ಧೂಳಿನಿಂದಾಗಿ ಮನೆಯ ಗೇಟ್, ಬಾಲ್ಕನಿ ರೇಲಿಂಗ್, ಕಿಟಕಿ ರಾಡ್‌ಗಳು ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಬೇಗನೆ ತುಕ್ಕು ಹಿಡಿಯುತ್ತವೆ. ಇದರಿಂದ ವಸ್ತುಗಳ ಹೊಳಪು ಕಡಿಮೆಯಾಗುವುದಲ್ಲದೆ, ಕ್ರಮೇಣ ಅವುಗಳ ಮೇಲ್ಮೈ ಕೂಡ ಹಾಳಾಗುವ ಸಾಧ್ಯತೆಯಿದೆ.
ಬಾಗಿಲಿನ ಹಿಡಿಕೆ, ಕತ್ತರಿ, ಕಬ್ಬಿಣದ ಪಾತ್ರೆಗಳು ಸೇರಿದಂತೆ ಹಲವು ವಸ್ತುಗಳಲ್ಲೂ ತುಕ್ಕು ಕಾಣಿಸಿಕೊಳ್ಳುತ್ತದೆ. ಇದನ್ನು ತೆಗೆಯಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ಲೀನರ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ತುಕ್ಕನ್ನು ಸ್ವಚ್ಛಗೊಳಿಸಬಹುದು.
ವಿನೆಗರ್‌ನಿಂದ ತುಕ್ಕು ಕ್ಲೀನ್:
ತುಕ್ಕು ಹಿಡಿದ ಕಬ್ಬಿಣ ಮತ್ತು ಸ್ಟೀಲ್ ವಸ್ತುಗಳನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಬಳಸಬಹುದು. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಸಿಂಪಡಿಸಿ ಸುಮಾರು 5ರಿಂದ 10 ನಿಮಿಷಗಳ ಕಾಲ ಬಿಡಬೇಕು. ಬಳಿಕ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿದರೆ ತುಕ್ಕಿನ ಕಲೆ ಕಡಿಮೆಯಾಗಬಹುದು.
ನಿಂಬೆ ಮತ್ತು ಅಡುಗೆ ಸೋಡಾ
ಬಾಗಿಲಿನ ಹಿಡಿಕೆ, ಬಾಲ್ಕನಿ ರೇಲಿಂಗ್ ಅಥವಾ ಇತರ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿದಿದ್ದರೆ ನಿಂಬೆ ಮತ್ತು ಅಡುಗೆ ಸೋಡಾ ಬಳಸಬಹುದು.
ಸ್ವಲ್ಪ ನಿಂಬೆ ರಸಕ್ಕೆ ಅಡುಗೆ ಸೋಡಾ ಸೇರಿಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟ್ ಅನ್ನು ತುಕ್ಕು ಹಿಡಿದ ಭಾಗಕ್ಕೆ ಹಚ್ಚಿ 15ರಿಂದ 20 ನಿಮಿಷಗಳ ಕಾಲ ಬಿಡಬೇಕು. ನಂತರ ಹಳೆಯ ಹಲ್ಲುಜ್ಜುವ ಬ್ರಷ್ ಅಥವಾ ಮೃದುವಾದ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ ನೀರಿನಿಂದ ಸ್ವಚ್ಛಗೊಳಿಸಬಹುದು.
ಅಡುಗೆ ಸೋಡಾ ಮತ್ತು ನೀರು
ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿಕೊಳ್ಳಬಹುದು. ಈ ಪೇಸ್ಟ್ ಅನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು.
ನಂತರ ಬ್ರಷ್ ಅಥವಾ ಬಟ್ಟೆಯಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಬೇಕು. ತುಕ್ಕು ಸಡಿಲಗೊಂಡ ಬಳಿಕ ಅದನ್ನು ತೆಗೆಯಲು ಸುಲಭವಾಗುತ್ತದೆ.
ತೆಂಗಿನ ಎಣ್ಣೆ
ಕಿಟಕಿ ಅಥವಾ ಬಾಗಿಲಿನ ಹಿಡಿಕೆಯಂತಹ ಸಣ್ಣ ಲೋಹದ ವಸ್ತುಗಳಲ್ಲಿ ಸ್ವಲ್ಪ ತುಕ್ಕು ಕಾಣಿಸಿಕೊಂಡಿದ್ದರೆ ತೆಂಗಿನ ಎಣ್ಣೆಯನ್ನು ಬಳಸಬಹುದು.
ಹಳೆಯ ಹಲ್ಲುಜ್ಜುವ ಬ್ರಷ್‌ಗೆ ಸ್ವಲ್ಪ ತೆಂಗಿನ ಎಣ್ಣೆ ಹಚ್ಚಿ ತುಕ್ಕು ಹಿಡಿದ ಜಾಗವನ್ನು ನಿಧಾನವಾಗಿ ಉಜ್ಜಬಹುದು. ಎಣ್ಣೆಯ ಲೇಪನವು ಮೇಲ್ಮೈಯಲ್ಲಿ ತೇವಾಂಶದ ಸಂಪರ್ಕವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ನಿಂಬೆ ಮತ್ತು ಉಪ್ಪು
ನಿಂಬೆ ಮತ್ತು ಉಪ್ಪಿನ ಸಂಯೋಜನೆಯನ್ನೂ ತುಕ್ಕು ತೆಗೆಯಲು ಬಳಸಬಹುದು. ತುಕ್ಕು ಹಿಡಿದ ಜಾಗದ ಮೇಲೆ ಸ್ವಲ್ಪ ಉಪ್ಪು ಹಾಕಿ, ಅದರ ಮೇಲೆ ನಿಂಬೆ ರಸವನ್ನು ಹಿಂಡಬೇಕು.
ಸುಮಾರು ಅರ್ಧ ಗಂಟೆಯ ಬಳಿಕ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಬಹುದು. ಬಳಿಕ ವಸ್ತುವನ್ನು ಸಂಪೂರ್ಣವಾಗಿ ಒಣಗಿಸುವುದು ಮುಖ್ಯ.
ಬೋರಾಕ್ಸ್ ಪೌಡರ್
ಕಬ್ಬಿಣದ ವಸ್ತುಗಳ ಮೇಲಿನ ತುಕ್ಕು ತೆಗೆಯಲು ಬೋರಾಕ್ಸ್ ಪೌಡರ್ ಬಳಸುವ ವಿಧಾನವೂ ಇದೆ. ಸುಮಾರು 3ರಿಂದ 4 ಟೀ ಚಮಚ ಬೋರಾಕ್ಸ್ ಪೌಡರ್‌ಗೆ ಒಂದು ಟೀ ಚಮಚ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಬೇಕು.
ಈ ಪೇಸ್ಟ್ ಅನ್ನು ತುಕ್ಕು ಹಿಡಿದ ಭಾಗಕ್ಕೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಬಿಡಬೇಕು. ನಂತರ ಸೂಕ್ತವಾದ ಸ್ಕ್ರಬ್ಬರ್ ಅಥವಾ ಸ್ಯಾಂಡ್‌ಪೇಪರ್‌ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಬಹುದು.
ಸ್ವಚ್ಛಗೊಳಿಸಿದ ಬಳಿಕ ಏನು ಮಾಡಬೇಕು?
ತುಕ್ಕು ತೆಗೆದ ನಂತರ ಕಬ್ಬಿಣ ಅಥವಾ ಸ್ಟೀಲ್ ವಸ್ತುವನ್ನು ನೀರಿನಿಂದ ತೊಳೆದಿದ್ದರೆ ಅದನ್ನು ಸಂಪೂರ್ಣವಾಗಿ ಒಣಗಿಸಬೇಕು. ತೇವಾಂಶ ಉಳಿದರೆ ಮತ್ತೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಅಗತ್ಯವಿದ್ದಲ್ಲಿ ಲೋಹದ ಮೇಲ್ಮೈಗೆ ಸೂಕ್ತವಾದ ರಕ್ಷಣಾತ್ಮಕ ಲೇಪನ ಅಥವಾ ಪೇಂಟ್ ಹಚ್ಚುವುದರಿಂದ ತುಕ್ಕು ಮರುಕಳಿಸುವುದನ್ನು ಕಡಿಮೆ ಮಾಡಬಹುದು.
ಸೂಚನೆ: ಯಾವುದೇ ಮನೆಮದ್ದನ್ನು ಬಳಸುವ ಮೊದಲು ವಸ್ತುವಿನ ಸಣ್ಣ, ಕಾಣದ ಭಾಗದಲ್ಲಿ ಪರೀಕ್ಷಿಸಿ. ಅಮೂಲ್ಯ, ಸೂಕ್ಷ್ಮ ಅಥವಾ ವಿಶೇಷ ಲೇಪನವಿರುವ ಲೋಹದ ವಸ್ತುಗಳ ಮೇಲೆ ಆಮ್ಲೀಯ ಪದಾರ್ಥಗಳನ್ನು ಬಳಸುವ ಮುನ್ನ ತಯಾರಕರ ಸೂಚನೆಗಳನ್ನು ಪರಿಶೀಲಿಸುವುದು ಉತ್ತಮ.



