ಬೆಂಗಳೂರು: ರಾಜ್ಯದಲ್ಲಿ ಶಾಲೆ–ಕಾಲೇಜುಗಳ ಆರಂಭಕ್ಕೂ ಮುನ್ನವೇ ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಈಗಾಗಲೇ ಶಾಲಾ ಶುಲ್ಕ ಹಾಗೂ ಶಾಲಾ ವಾಹನಗಳ ಬಾಡಿಗೆ ದರ ಹೆಚ್ಚಳವಾಗಿರುವ ನಡುವೆಯೇ, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಗಳು ಶೇಕಡ 20ರಿಂದ 25ರಷ್ಟು ಏರಿಕೆಯಾಗಿವೆ.
ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಇಂಧನ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಉದ್ಯಮಿಗಳು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ವಸ್ತುಗಳ ಪೂರೈಕೆ ಅಸ್ಥಿರಗೊಂಡಿದ್ದು, ಪೇಪರ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳು ಮತ್ತು ಬಣ್ಣಗಳ ಲಭ್ಯತೆಯೂ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಇಂಧನ ದರ ಏರಿಕೆಯಿಂದ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್ ಉತ್ಪಾದನೆ ಮತ್ತು ಮುದ್ರಣ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಶಾಲಾ ಸಾಮಗ್ರಿಗಳ ಬೆಲೆಗಳು ಗಣನೀಯವಾಗಿ ಹೆಚ್ಚಳಗೊಂಡಿವೆ.
ಈ ಬೆಲೆ ಏರಿಕೆ ನೇರವಾಗಿ ಪೋಷಕರ ಮೇಲೆ ಪರಿಣಾಮ ಬೀರಿದ್ದು, ಶಾಲಾ ಆರಂಭದ ಹೊತ್ತಿನಲ್ಲಿ ಖರ್ಚಿನ ಭಾರ ಹೆಚ್ಚಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.



