ಕೋಲಾರ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ರೌಡಿಶೀಟರ್ ಸ್ಟಾನ್ಲಿಯನ್ನು ಪೊಲೀಸರು ಮಗಳ ಮದುವೆ ಮಂಟಪದಿಂದಲೇ ಬಂಧಿಸಿರುವ ಘಟನೆ ಕೆಜಿಎಫ್ ನಗರದಲ್ಲಿ ನಡೆದಿದೆ.
ಸುಸೈಪಾಳ್ಯಂ ಪ್ರದೇಶದ ಚರ್ಚ್‌ನಲ್ಲಿ ಮಗಳ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಂಡರ್ಸನ್‌ಪೇಟೆ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಿನಿಮೀಯ ಕಾರ್ಯಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಮದುವೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಕ್ಲೇನ್ ಎಂಬ ಉದ್ಯಮಿಗೆ ಸ್ಟಾನ್ಲಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ. ‘ಮಗಳ ಮದುವೆಗೆ ಹಣ ಕೊಡಲೇಬೇಕು’ ಎಂದು ಒತ್ತಡ ಹೇರುತ್ತಿದ್ದಾನೆ ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದರು.
ಈಗಾಗಲೇ ಗಡಿಪಾರು ಆಗಿದ್ದ ಸ್ಟಾನ್ಲಿ ಕಾನೂನು ಉಲ್ಲಂಘಿಸಿ ಮತ್ತೆ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಕಿರುಕುಳ ನೀಡಿ ಹಪ್ತಾ ವಸೂಲಿಗೆ ಇಳಿದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಸೂಚನೆ ಮೇರೆಗೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಚರ್ಚ್‌ಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



