ಕೊಡಗು: ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟದ ದುರಂತ ಇದೀಗ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ಮಹಿಳೆ ಸಾವಿನ ಬೆನ್ನಲ್ಲೇ ಗಾಯಗೊಂಡಿದ್ದ ‘ಮಾರ್ತಾಂಡ’ ಸಾಕಾನೆಯೂ ಮೃತಪಟ್ಟಿದ್ದು, 2019ರಲ್ಲೇ ತಜ್ಞರ ಸಮಿತಿ ನೀಡಿದ್ದ ಎಚ್ಚರಿಕೆ ವರದಿ ಇದೀಗ ಮತ್ತೆ ಬೆಳಕಿಗೆ ಬಂದಿದೆ.
ಹೈಕೋರ್ಟ್ ಸೂಚನೆಯಂತೆ ರಚನೆಯಾಗಿದ್ದ ತಜ್ಞರ ಸಮಿತಿ, ದುಬಾರೆ ಶಿಬಿರದಲ್ಲಿ ಪ್ರವಾಸಿಗರ ಅತಿಯಾದ ಒತ್ತಡದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆ ಆಗುತ್ತಿದೆ ಎಂದು ಎಚ್ಚರಿಸಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಹಾಗೂ ಶಿಬಿರದಲ್ಲಿ ಗರಿಷ್ಠ 15 ಆನೆಗಳಷ್ಟೇ ಇರಬೇಕು ಎಂದು ಶಿಫಾರಸು ಮಾಡಲಾಗಿತ್ತು.
ಆದರೆ ಈ ಎಲ್ಲಾ ಶಿಫಾರಸುಗಳನ್ನು ಅರಣ್ಯ ಇಲಾಖೆ ಕಡೆಗಣಿಸಿದೆ ಎನ್ನಲಾಗಿದೆ. ಸದ್ಯ ದುಬಾರೆ ಶಿಬಿರದಲ್ಲಿ 30ಕ್ಕೂ ಹೆಚ್ಚು ಆನೆಗಳನ್ನು ಇರಿಸಲಾಗಿದ್ದು, ಪ್ರವಾಸಿಗರ ಸಂಖ್ಯೆಯೂ ನಿಯಂತ್ರಣ ತಪ್ಪಿದೆ ಎಂಬ ಆರೋಪ ಕೇಳಿಬಂದಿದೆ.
ಮೇ 18ರಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಮಾರ್ತಾಂಡ ಆನೆ ಪ್ರವಾಸಿಗರಿದ್ದ ಪ್ರದೇಶಕ್ಕೆ ದೌಡಾಯಿಸಿದ್ದು, ಚೆನ್ನೈ ಮೂಲದ ತುಳಸಿ ಎಂಬ ಮಹಿಳೆ ಮೃತಪಟ್ಟಿದ್ದರು.
ತೀವ್ರ ಆಂತರಿಕ ಗಾಯಗಳಿಂದ ಬಳಲುತ್ತಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಎರಡು ಜೀವ ಬಲಿಯಾದ ಬಳಿಕ ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.



