ಬೆಂಗಳೂರು: ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದ್ದು, ಇದರಲ್ಲಿ 14 ಸಾವಿರ ಟನ್ ಯೂರಿಯಾ ಅಭಾವವೂ ಸೇರಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ ಎಂದರು.
ರೈತರು ರಸಗೊಬ್ಬರ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರ್ಯಾಯ ಕೃಷಿ ವಿಧಾನಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಜೊತೆಗೆ ರಸಗೊಬ್ಬರ ದಾಸ್ತಾನು, ಅಕ್ರಮ ವಿತರಣೆ ಹಾಗೂ ಬೇರೆಡೆಗೆ ತಿರುಗಿಸುವಿಕೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿರುವುದರಿಂದ ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ದೊರೆಯುವಂತೆ FRUITS ಐಡಿ ಆಧಾರಿತ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರೀತಿಯ ರಸಗೊಬ್ಬರ ಹಂಚಿಕೆ ಮಾಡಿದೆ. ಇದರಲ್ಲಿ 11.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 4 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2.12 ಲಕ್ಷ ಮೆಟ್ರಿಕ್ ಟನ್ ಎಂಒಪಿ, 11.88 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ 0.95 ಲಕ್ಷ ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿವೆ.
ಆದರೆ ಈ ವರ್ಷ ಯೂರಿಯಾದ ಆರಂಭಿಕ ದಾಸ್ತಾನು ಪ್ರಮಾಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಕುಸಿದಿದೆ. 2023ರಲ್ಲಿ 3.91 ಲಕ್ಷ ಮೆಟ್ರಿಕ್ ಟನ್ ಹಾಗೂ 2024ರಲ್ಲಿ 5.41 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದ್ದರೆ, ಈ ವರ್ಷ ಅದು ಕೇವಲ 2.80 ಲಕ್ಷ ಮೆಟ್ರಿಕ್ ಟನ್‌ಗೆ ಇಳಿಕೆಯಾಗಿದೆ ಎಂದು ಸಚಿವರು ಹೇಳಿದರು.
ಏಪ್ರಿಲ್ ತಿಂಗಳಲ್ಲಿ ರಾಜ್ಯವು 4.02 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇಟ್ಟಿದ್ದರೂ, ಕೇಂದ್ರದಿಂದ ಕೇವಲ 2.54 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಪರಿಣಾಮವಾಗಿ 1.48 ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಇದರಲ್ಲಿ 0.38 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 0.14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆ ಸೇರಿದೆ.
ಮೇ ತಿಂಗಳಲ್ಲಿ 4.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದರೂ, ಇದುವರೆಗೆ ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಇನ್ನೂ 2.77 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿಯಿದ್ದು, ಇದರಲ್ಲಿ 0.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಹಾಗೂ 0.78 ಲಕ್ಷ ಮೆಟ್ರಿಕ್ ಟನ್ ಡಿಎಪಿ ಪೂರೈಕೆಯಾಗಬೇಕಿದೆ.
ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಮುಂಗಾರು ಬಿತ್ತನೆ ಅವಧಿಯಲ್ಲಿ ರೈತರು ಗಂಭೀರ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಕೃಷಿ ಸಚಿವರು ಎಚ್ಚರಿಸಿದ್ದಾರೆ.



