ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಬಾತ್‌ರೂಂ ನೆಲದಡಿ ಹೂತು, ಬಳಿಕ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಘಟನೆ ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ರೂಬಿ ಶರ್ಮಾ ತನ್ನ ಪತಿ ಸುರೇಂದ್ರ ಶರ್ಮಾ ಸುಮಾರು ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಆದರೆ, 45 ದಿನಗಳ ಬಳಿಕ ನಡೆದ ವಿಚಾರಣೆಯಲ್ಲಿ ರೂಬಿ ಸತ್ಯ ಒಪ್ಪಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ.
ತನಿಖೆಯ ಅವಧಿಯಲ್ಲಿ ರೂಬಿ, ಪೊಲೀಸರೊಂದಿಗೆ ಪತಿಗಾಗಿ ಹುಡುಕಾಟ ನಡೆಸುವಂತೆ ನಟಿಸಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ, ಪತಿ ಕಾಣೆಯಾಗಿರುವ ನೋವಿನಲ್ಲಿ ಇದ್ದಂತೆ ವರ್ತಿಸಿ ಎಲ್ಲರ ಸಹಾನುಭೂತಿ ಪಡೆಯಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಸುರೇಂದ್ರ ಶರ್ಮಾ ಅವರ ಸಹೋದರರಿಗೆ ರೂಬಿ ನೀಡುತ್ತಿದ್ದ ಮಾಹಿತಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿದ್ದವು. ಪತಿ ನಾಪತ್ತೆಯಾದ ದಿನದ ಕುರಿತು ಆಕೆ ಪದೇಪದೆ ಬದಲಾಗುವ ಹೇಳಿಕೆ ನೀಡುತ್ತಿದ್ದ ಕಾರಣ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಮನೆಯಲ್ಲೇ ಮರುಶೋಧ ನಡೆಸಿದಾಗ, ಬಾತ್‌ರೂಂನಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಟೈಲ್ಸ್ ಅನುಮಾನಕ್ಕೆ ಕಾರಣವಾಯಿತು. ನೆಲವನ್ನು ಒಡೆದು ಪರಿಶೀಲಿಸಿದಾಗ ಕಾಂಕ್ರೀಟ್ ಅಡಿಯಲ್ಲಿ ಹೂತಿದ್ದ ಅಸ್ಥಿಪಂಜರ ಪತ್ತೆಯಾಯಿತು. ಬಳಿಕ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ನಿಖರ ಕಾರಣ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಸುರೇಂದ್ರ ಶರ್ಮಾ ಕಳೆದ ಕೆಲವು ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದರು. ಮದ್ಯ ಖರೀದಿಸಲು ಪತ್ನಿಯಿಂದ ಆಗಾಗ ಹಣ ಕೇಳುತ್ತಿದ್ದರು. ಹಣ ನೀಡಲು ನಿರಾಕರಿಸಿದರೆ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಮಾರು 16 ವರ್ಷಗಳ ಹಿಂದೆ ವಿವಾಹವಾಗಿದ್ದ ಸುರೇಂದ್ರ ಮತ್ತು ರೂಬಿ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಕುಟುಂಬದ ಪ್ರಮುಖ ಆದಾಯ ಮೂಲ ಸುರೇಂದ್ರ ಅವರ ತಂದೆಯ ಪಿಂಚಣಿಯಾಗಿದ್ದು, ಅದನ್ನು ಸುರೇಂದ್ರ ಹಾಗೂ ಅವರ ಸಹೋದರ ಅನಿಲ್ ಶರ್ಮಾ ಹಂಚಿಕೊಂಡು ಬಳಸುತ್ತಿದ್ದರು.
ಪೊಲೀಸರ ಶಂಕೆಯಂತೆ ಮೇ 18ರಂದು ಸುರೇಂದ್ರ ಶರ್ಮಾ ಅವರನ್ನು ಕೊಲೆ ಮಾಡಲಾಗಿದೆ. ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದ್ದು, ರೂಬಿ ಮೊದಲು ಪಾಯಸದಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಪತಿಗೆ ನೀಡಿದ್ದಾಳೆ ಎನ್ನಲಾಗಿದೆ. ಪ್ರಜ್ಞಾಹೀನರಾದ ಬಳಿಕ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿಯಲಿದೆ.
ಮದ್ಯ ಸೇವಿಸಿದ ಬಳಿಕ ಸುರೇಂದ್ರ ಗಂಟೆಗಟ್ಟಲೆ ನಿದ್ರಿಸುವುದು ಕುಟುಂಬಕ್ಕೆ ಸಾಮಾನ್ಯವಾಗಿದ್ದ ಕಾರಣ, ಅವರು ಚಲನೆಯಿಲ್ಲದೆ ಮಲಗಿದ್ದರೂ ಇಬ್ಬರು ಪುತ್ರಿಯರಿಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ನಡೆದ ಮರುದಿನ ರೂಬಿ ತನ್ನ ಇಬ್ಬರು ಪುತ್ರಿಯರನ್ನು ಸುರೇಂದ್ರ ಅವರ ಸಹೋದರ ಅನಿಲ್ ಶರ್ಮಾ ಅವರ ಮನೆಗೆ ಬಿಟ್ಟು ತಾನೊಬ್ಬಳೇ ಮನೆಗೆ ಹಿಂದಿರುಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು ಬ್ಯಾಂಕ್ ಖಾತೆಯ ಎಟಿಎಂ ವಹಿವಾಟು. ಪಿಂಚಣಿ ಹಣ ಜಮೆಯಾಗುತ್ತಿದ್ದ ಖಾತೆಯ ಎಟಿಎಂ ಕಾರ್ಡ್ ಸುರೇಂದ್ರ ಅವರ ಬಳಿಯೇ ಇತ್ತು. ಅವರು ನಾಪತ್ತೆಯಾದ ಬಳಿಕವೂ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸಹೋದರ ಅನಿಲ್ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ತನಿಖೆಯ ದಿಕ್ಕೇ ಬದಲಾಗಿದ್ದು, ಕೊಲೆ ರಹಸ್ಯ ಬಯಲಾಗಿದೆ.
ಪ್ರಸ್ತುತ ರೂಬಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಕೊಲೆಯ ಹಿಂದೆ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
ಉಪ ಪೊಲೀಸ್ ಆಯುಕ್ತ ಸಯ್ಯದ್ ಅಲಿ ಅಬ್ಬಾಸ್ ಮಾತನಾಡಿ, “ಒಬ್ಬ ಮಹಿಳೆ ಮಾತ್ರವೇ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಯೊಳಗೆ ಗುಂಡಿ ತೋಡಿ ಶವವನ್ನು ಹೂಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಈ ಕೃತ್ಯದಲ್ಲಿ ಮತ್ತಾರಾದರೂ ಭಾಗಿಯಾಗಿರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ರೂಬಿ ಹೊರತುಪಡಿಸಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.



