ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಪ್ರಶಾಂತನಗರದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಘಟನೆಯಲ್ಲಿ ಪತಿ ಪ್ರಕಾಶ್ (54), ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಮೃತಪಟ್ಟಿದ್ದಾರೆ.
ಮೃತ ಪ್ರಕಾಶ್ ರಾಯ್ಕರ್ ಗಂಗಾವತಿಯಲ್ಲಿ ಜ್ಯುವೆಲರಿ ಅಂಗಡಿ ನಡೆಸುತ್ತಿದ್ದರು. ಸಾಲದ ಒತ್ತಡದಿಂದಾಗಿ ಕುಟುಂಬ ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದೇ ಕಾರಣಕ್ಕೆ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕುಟುಂಬದ ಮೂವರು ಮನೆಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಾಹಿತಿ ತಿಳಿದ ಕೂಡಲೇ ಗಂಗಾವತಿ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಸಾಲಬಾಧೆಯೇ ಈ ದುರ್ಘಟನೆಗೆ ಪ್ರಮುಖ ಕಾರಣವೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.



