HomeKarnataka Newsಜೈಲಿನಲ್ಲಿರುವ ವಿಚಾರಣಾಧೀನ ಕೈದಿಗೆ ಜಮೀನು ಮಾರಾಟಕ್ಕೆ ಅವಕಾಶ ನೀಡಿದ ಹೈಕೋರ್ಟ್

ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗೆ ಜಮೀನು ಮಾರಾಟಕ್ಕೆ ಅವಕಾಶ ನೀಡಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ವ್ಯಕ್ತಿ ತನ್ನ ಆಸ್ತಿ ಹಕ್ಕುಗಳನ್ನು ಕಳೆದುಕೊಳ್ಳುವುದಿಲ್ಲ. ಜೈಲಿನಲ್ಲಿದ್ದಾನೆ ಎಂಬ ಕಾರಣಕ್ಕೆ ಆತನ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ಬಸವರಾಜು ಶಂಕರಪ್ಪ ಅವ್ವಣ್ಣವರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ತೀರ್ಪಿನಲ್ಲಿ, ವಿಚಾರಣಾಧೀನ ಕೈದಿಗೂ ಸಾಮಾನ್ಯ ನಾಗರಿಕನಿಗಿರುವ ಎಲ್ಲ ಕಾನೂನುಬದ್ಧ ಹಕ್ಕುಗಳು ಮುಂದುವರೆಯುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ತನ್ನ ಚರ ಹಾಗೂ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ನೋಂದಣಿ ಮಾಡಿಸುವ ಹಕ್ಕು ಆತನಿಗೆ ಇದೆ. ಕೇವಲ ಜೈಲಿನಲ್ಲಿರುವ ಕಾರಣಕ್ಕೆ ಈ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅಲ್ಲದೆ, ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯನ್ನು ‘ನಾಗರಿಕ ಮರಣ’ ಹೊಂದಿದವನಂತೆ ಪರಿಗಣಿಸಲಾಗುವುದಿಲ್ಲ. ಜೈಲು ಶಿಕ್ಷೆ ಅಥವಾ ನ್ಯಾಯಾಂಗ ಬಂಧನದಿಂದ ವ್ಯಕ್ತಿಯ ಆಸ್ತಿ ಮಾಲೀಕತ್ವ ಅಥವಾ ಕಾನೂನುಬದ್ಧ ಹಕ್ಕುಗಳು ಅಂತ್ಯಗೊಳ್ಳುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನೋಂದಣಿ ಕಾಯ್ದೆ-1908ರ ಸೆಕ್ಷನ್ 38 ಅನ್ನು ಉಲ್ಲೇಖಿಸಿರುವ ನ್ಯಾಯಾಲಯ, ಜೈಲಿನಲ್ಲಿರುವ ವ್ಯಕ್ತಿಯನ್ನು ಕಡ್ಡಾಯವಾಗಿ ಉಪನೋಂದಣಾಧಿಕಾರಿ ಕಚೇರಿಗೆ ಕರೆತರಬೇಕೆಂಬ ನಿಯಮವಿಲ್ಲ. ಬದಲಾಗಿ, ಉಪನೋಂದಣಾಧಿಕಾರಿಯೇ ಜೈಲಿಗೆ ತೆರಳಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯ ಅನುಮತಿ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಜೈಲು ಅಧಿಕಾರಿಗಳ ಕರ್ತವ್ಯ ಎಂದು ನಿರ್ದೇಶನ ನೀಡಿದೆ.

ಅರ್ಜಿದಾರರು ಯಾವುದೇ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ಶಾಸನದಿಂದ ದೊರೆತಿರುವ ಕಾನೂನುಬದ್ಧ ಹಕ್ಕನ್ನು ಜಾರಿಗೊಳಿಸುವಂತೆ ಮಾತ್ರ ಮನವಿ ಮಾಡಿದ್ದಾರೆ. ಆಡಳಿತಾತ್ಮಕ ತೊಂದರೆ ಅಥವಾ ನಿರ್ಲಕ್ಷ್ಯವನ್ನು ನೆಪವನ್ನಾಗಿ ಮಾಡಿಕೊಂಡು ನಾಗರಿಕರ ಕಾನೂನುಬದ್ಧ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಉಪನೋಂದಣಾಧಿಕಾರಿಗಳು ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಅನುಮತಿ ಹಾಗೂ ಸೂಕ್ತ ಭದ್ರತೆ ಒದಗಿಸುವಂತೆ ಧಾರವಾಡ ಕೇಂದ್ರ ಕಾರಾಗೃಹದ ವರಿಷ್ಠಾಧಿಕಾರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಕ್ರಿಮಿನಲ್ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿರುವ ಧಾರವಾಡ ಜಿಲ್ಲೆಯ ಕಮಲಾಪುರ ಗ್ರಾಮದ ಬಸವರಾಜು ಶಂಕರಪ್ಪ ಅವ್ವಣ್ಣವರ ತಮ್ಮ 22 ಗುಂಟೆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜೈಲಿನಲ್ಲಿದ್ದ ಕಾರಣ ಉಪನೋಂದಣಾಧಿಕಾರಿ ಕಚೇರಿಗೆ ಖುದ್ದು ತೆರಳಲು ಸಾಧ್ಯವಾಗಿರಲಿಲ್ಲ. ಉಪನೋಂದಣಾಧಿಕಾರಿಗಳು ಜೈಲಿಗೆ ಬಂದು ನೋಂದಣಿ ನಡೆಸಲು ಸಮ್ಮತಿಸಿದ್ದರೂ, ಜೈಲು ಅಧಿಕಾರಿಗಳಿಂದ ಅಗತ್ಯ ಸಹಕಾರ ಸಿಗದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img