ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ನಲ್ಲಿ ಇಬ್ಬರು ವಿದೇಶಿ ಮಹಿಳೆಯರ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಸಂಬಂಧಿ ಎನ್ನಲಾದ ಪ್ರಮುಖ ಶಂಕಿತ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ರಜಾ ದಾರ್, ಹಸನ್ ರಜಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂದು ಗುರುತಿಸಲಾಗಿದ್ದು, ಲಾಹೋರ್ ನ್ಯಾಯಾಲಯವು ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಮುಖ ಶಂಕಿತ ಮುಹಮ್ಮದ್ ರಜಾ ದಾರ್ ಅವರು ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ಪ್ರಕರಣದ ಸೂಕ್ಷ್ಮ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, ಜೂನ್ 29ರಂದು ಲಾಹೋರ್ನಲ್ಲಿ ನೆದರ್ಲ್ಯಾಂಡ್ಸ್ನ ಒಬ್ಬರು ಹಾಗೂ ವೆನೆಜುವೆಲಾದ ಮತ್ತೊಬ್ಬರು ಸೇರಿದಂತೆ ಇಬ್ಬರು ವಿದೇಶಿ ಮಹಿಳೆಯರನ್ನು ಐವರು ಆರೋಪಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯೊಬ್ಬರ ತಂದೆ ಸ್ಪೇನ್ನಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ಮಹಿಳೆಯರನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ನಂತರ ಪೊಲೀಸರು ಐವರು ಶಂಕಿತರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 365A (ಅಪಹರಣ) ಹಾಗೂ ಸೆಕ್ಷನ್ 375A (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, 2025ರ ಅಕ್ಟೋಬರ್ನಲ್ಲಿ ಸಿಂಗಾಪುರದಲ್ಲಿ ಪ್ರಮುಖ ಆರೋಪಿ ರಜಾ ದಾರ್ ಮತ್ತು ಸಂತ್ರಸ್ತೆಯರ ಪರಿಚಯವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ವ್ಯವಹಾರಿಕ ಪಾಲುದಾರರಾಗಿದ್ದ ಅವರು, ಮಹಿಳೆಯರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ್ದು, ವ್ಯವಹಾರ ವೀಸಾ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರು ಜೂನ್ 29ರಂದು ಲಾಹೋರ್ಗೆ ಬಂದಿಳಿದ ಬಳಿಕ, ಆರೋಪಿಗಳು ಅವರನ್ನು ಅಪಹರಿಸಿ ಖಾಸಗಿ ನಿವಾಸಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಬಿಡುಗಡೆ ಮಾಡಲು ಹಣದ ಬೇಡಿಕೆಯನ್ನೂ ಇಟ್ಟಿದ್ದರು ಎಂದು ಸಂತ್ರಸ್ತೆಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಪರಾರಿಯಾಗಿರುವ ಐದನೇ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.



