ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಕ್ರೀಡಾ ಸಚಿವಾಲಯ ಪ್ರಕಟಿಸಿದ್ದು, ಈ ಬಾರಿ ಒಟ್ಟು 17 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಆದರೆ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಈ ಬಾರಿ ಯಾವುದೇ ಕ್ರೀಡಾಪಟುವಿಗೂ ನೀಡದಿರಲು ಸಚಿವಾಲಯ ತೀರ್ಮಾನಿಸಿದೆ.
ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಪಟ್ಟಿಯನ್ನು ಸುಮಾರು ಆರು ತಿಂಗಳ ಬಳಿಕ ಮರುಪರಿಶೀಲನೆಗೆ ಒಳಪಡಿಸಿದ ಕ್ರೀಡಾ ಸಚಿವಾಲಯ, ಅಂತಿಮವಾಗಿ 17 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಅನುಮೋದಿಸಿದೆ. 2014ರ ಬಳಿಕ ಖೇಲ್ ರತ್ನ ಪ್ರಶಸ್ತಿಯನ್ನು ಯಾವುದೇ ಕ್ರೀಡಾಪಟುವಿಗೂ ನೀಡದೇ ಇರುವುದೇ ಇದೇ ಮೊದಲ ಬಾರಿಯಾಗಿದೆ.
ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಹಾರ್ದಿಕ್ ಸಿಂಗ್ ಅವರ ಹೆಸರು ಕಾಣಿಸಿಕೊಂಡಿಲ್ಲ.
ಇನ್ನು ಅರ್ಜುನ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಒಟ್ಟು 24 ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿಯ ಘನತೆ ಹಾಗೂ ಅರ್ಹತೆಯ ಮಾನದಂಡವನ್ನು ಕಾಪಾಡುವ ಉದ್ದೇಶದಿಂದ ಸಚಿವಾಲಯವು 17 ಕ್ರೀಡಾಪಟುಗಳ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ.
ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ 17 ಕ್ರೀಡಾಪಟುಗಳು
ಅಥ್ಲೆಟಿಕ್ಸ್‌ನ ತೇಜಸ್ವಿನ್ ಶಂಕರ್, ಪ್ರಿಯಾಂಕಾ ಗೋಸ್ವಾಮಿ ಹಾಗೂ ಮುಹಮ್ಮದ್ ಅಜ್ಮಲ್, ಬಾಕ್ಸಿಂಗ್‌ನ ನರೇಂದರ್, ಚೆಸ್‌ನ ವಿದಿತ್ ಗುಜರಾತಿ ಹಾಗೂ ದಿವ್ಯಾ ದೇಶಮುಖ್, ಕಿವುಡರ ಶೂಟಿಂಗ್‌ನ ಧನುಷ್ ಶ್ರೀಕಾಂತ್, ಹಾಕಿಯ ರಾಜ್‌ಕುಮಾರ್ ಪಾಲ್ ಹಾಗೂ ಲಾಲ್ರೆಮ್ಸಿಯಾಮಿ, ಕಬಡ್ಡಿಯ ಸುರ್ಜಿತ್ ಹಾಗೂ ಪೂಜಾ, ಪ್ಯಾರಾ ಶೂಟಿಂಗ್‌ನ ರುದ್ರಾಂಶ್ ಖಂಡೇಲ್‌ವಾಲ್, ಪ್ಯಾರಾ ಅಥ್ಲೆಟಿಕ್ಸ್‌ನ ಏಕ್ತಾ ಭ್ಯಾನ್, ರೋಯಿಂಗ್‌ನ ಅರವಿಂದ್ ಸಿಂಗ್, ಶೂಟಿಂಗ್‌ನ ಅಖಿಲ್ ಶಿಯೋರಾನ್, ಬ್ಯಾಡ್ಮಿಂಟನ್‌ನ ತ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.
ಜೀವಮಾನ ಸಾಧನೆಗಾಗಿ ಅರ್ಜುನ ಪ್ರಶಸ್ತಿ
ಫುಟ್‌ಬಾಲ್ ಕ್ಷೇತ್ರದ ಐ. ಅರುಮೈನಾಯಗಂ ಅವರಿಗೆ ಅರ್ಜುನ ಪ್ರಶಸ್ತಿಯ ಜೀವಮಾನ ಸಾಧನೆ ವಿಭಾಗದಲ್ಲಿ ಗೌರವ ನೀಡಲಾಗಿದೆ. ಅವರು 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು.
ದ್ರೋಣಾಚಾರ್ಯ ಪ್ರಶಸ್ತಿ
ದ್ರೋಣಾಚಾರ್ಯ ಪ್ರಶಸ್ತಿಯ ಸಾಮಾನ್ಯ ವಿಭಾಗದಲ್ಲಿ ಬಾಕ್ಸಿಂಗ್‌ನ ಚೋಟೆ ಲಾಲ್ ಯಾದವ್, ಪರ್ವೀರ್ ಸಿಂಗ್ ಹಾಗೂ ನೇಹಾ ಚವಾಣ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಜೀವಮಾನ ಸಾಧನೆ ವಿಭಾಗದಲ್ಲಿ ಧರ್ಮೇಂದ್ರ ಯಾದವ್ ಹಾಗೂ ವೀರೇಂದ್ರ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಕ್ರಿಕೆಟಿಗರಿಗೆ ಈ ಬಾರಿಯೂ ಸ್ಥಾನವಿಲ್ಲ
1991ರಲ್ಲಿ ಪ್ರಶಸ್ತಿ ಆರಂಭವಾದ ಬಳಿಕ ಈ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಅತ್ಯಂತ ತಡವಾಗಿ ಪ್ರಕಟಗೊಂಡಿವೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿಯ ಪಟ್ಟಿಯಲ್ಲೂ ಯಾವುದೇ ಕ್ರಿಕೆಟಿಗರಿಗೆ ಸ್ಥಾನ ದೊರೆತಿಲ್ಲ.
2023ರಲ್ಲಿ ವೇಗಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದ ಬಳಿಕ ಯಾವುದೇ ಕ್ರಿಕೆಟಿಗರು ಈ ಗೌರವಕ್ಕೆ ಆಯ್ಕೆಯಾಗಿಲ್ಲ. ಖೇಲ್ ರತ್ನ ಪ್ರಶಸ್ತಿಯು ₹25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದರೆ, ಅರ್ಜುನ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಸಾಮಾನ್ಯವಾಗಿ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಕೋವಿಡ್-19 ಆರೋಗ್ಯ ನಿಯಮಾವಳಿಗಳ ಹಿನ್ನೆಲೆಯಲ್ಲಿ 2020ರಿಂದ ಸಮಾರಂಭದ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿತ್ತು. ನಂತರದ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬಗೊಂಡಿದೆ. ಕಳೆದ ವರ್ಷ ಪ್ರಕಟಗೊಂಡ ಪ್ರಶಸ್ತಿಗಳನ್ನು ಈ ವರ್ಷದ ಜನವರಿ 17ರಂದು ಪ್ರದಾನ ಮಾಡಲಾಗಿತ್ತು.



