ಏಷ್ಯನ್ ಗೇಮ್ಸ್ 2026ರ ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಅಂಕುಶ್ ಪಂಗಲ್ ಚಿನ್ನದ ಪದಕ ಗೆದ್ದು ಮಿಂಚಿದ್ದಾರೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್-ಸಿಯಾಂಗ್ ಅವರನ್ನು ಸೋಲಿಸುವ ಮೂಲಕ ಅಂಕುಶ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಈ ಗೆಲುವಿನೊಂದಿಗೆ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಂದೇ ದಿನ ಮೂರನೇ ಚಿನ್ನದ ಪದಕ ಒಲಿದಂತಾಗಿದೆ. ಫೈನಲ್‌ನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಅಂಕುಶ್, ಎದುರಾಳಿಯ ಸವಾಲನ್ನು ಮೆಟ್ಟಿನಿಂತು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಅಂಕುಶ್ ಅದ್ಭುತ ಕಮ್‌ಬ್ಯಾಕ್ ಪ್ರದರ್ಶಿಸಿದ್ದರು. ಉಜ್ಬೇಕಿಸ್ತಾನದ ಹಾಲಿ 75 ಕೆಜಿ ವಿಶ್ವ ಚಾಂಪಿಯನ್ ಫಜ್ಲಿದ್ದೀನ್ ಎರ್ಕಿನ್‌ಬೋವ್ ಅವರನ್ನು 4-1 ಅಂತರದಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಈ ವರ್ಷದ ಆರಂಭದಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಅಂಕುಶ್ ಪಂಗಲ್ ಚಿನ್ನದ ಪದಕ ಗೆದ್ದಿದ್ದರು. ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.



