ಬಾಲಿವುಡ್ ನಟಿ ನುಸ್ರತ್ ಭರುಚಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್… ಸಿನಿಮಾ ಶೂಟಿಂಗ್ ವೇಳೆ ನಟಿ ನುಸ್ರತ್ ಅಪಘಾತಕ್ಕೀಡಾಗಿದ್ದು, ಬೆನ್ನುಮೂಳೆಗೆ ಗಂಭೀರ ಗಾಯವಾಗಿದೆ. ಸದ್ಯ ಬಾಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿಯನ್ನು ಮುಂಬೈಗೆ ಏರ್‌ಲಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ನುಸ್ರತ್‌ಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಟ ಟೈಗರ್ ಶ್ರಾಫ್ ಅಭಿನಯದ ಮುಂದಿನ ಸಿನಿಮಾದ ಚಿತ್ರೀಕರಣಕ್ಕಾಗಿ ನುಸ್ರತ್ ಬಾಲಿಗೆ ತೆರಳಿದ್ದರು. ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲೇ ಅಪಘಾತ ಸಂಭವಿಸಿದ್ದು, ನಟಿಯ ಬೆನ್ನುಮೂಳೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಅಪಘಾತದ ಬೆನ್ನಲ್ಲೇ ನುಸ್ರತ್ ಅವರನ್ನು ಬಾಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸಿದ್ದು, ಬೆನ್ನುಮೂಳೆಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ನಿರ್ಧರಿಸಿದ್ದಾರೆ ಎಂದು ಚಿತ್ರತಂಡದ ಪ್ರಚಾರಕಿ ಸಂಚಿತಾ ತ್ರಿವೇದಿ ಮಾಹಿತಿ ನೀಡಿದ್ದಾರೆ.
ಸದ್ಯ ನುಸ್ರತ್ ಅವರನ್ನು ಬಾಲಿಯಿಂದ ಮುಂಬೈಗೆ ಕರೆತರಲು ಸಿದ್ಧತೆ ನಡೆಯುತ್ತಿದೆ. ವಿಮಾನದ ಮೂಲಕ ಮುಂಬೈಗೆ ಕರೆತಂದ ಬಳಿಕ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆ ಇದೆ.
ಟೈಗರ್ ಶ್ರಾಫ್ ಅಭಿನಯದ ಮುಂದಿನ ಸಿನಿಮಾದಲ್ಲಿ ನುಸ್ರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪಶ್ಮಿನಾ ರೋಷನ್, ಅಭಿಷೇಕ್ ಬ್ಯಾನರ್ಜಿ ಹಾಗೂ ಎಲ್ವಿಶ್ ಯಾದವ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಆದರೆ ಈಗ ಸಂಭವಿಸಿರುವ ಅಪಘಾತ ಚಿತ್ರತಂಡಕ್ಕೂ ಆತಂಕ ತಂದಿದೆ. ಬೆನ್ನುಮೂಳೆಯ ಗಾಯವಾಗಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಬಳಿಕ ನುಸ್ರತ್‌ಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಾಗಬಹುದು. ಹೀಗಾಗಿ ಮುಂದಿನ ಕೆಲವು ವಾರಗಳ ಚಿತ್ರೀಕರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಅಭಿಮಾನಿಗಳ ಚಿತ್ತ ನುಸ್ರತ್ ಆರೋಗ್ಯದತ್ತ ನೆಟ್ಟಿದ್ದು, ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಸಿನಿಮಾ ಸೆಟ್‌ಗೆ ಮರಳಲಿ ಎಂದು ಹಾರೈಸುತ್ತಿದ್ದಾರೆ.



