ಗದಗ: ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿರುವ ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (MGRDPRU), ಭಾರತೀಯ ತಂತ್ರಜ್ಞಾನ ಸಂಸ್ಥೆ (IIT Bombay) ಆಯೋಜಿಸಿರುವ ಪ್ರತಿಷ್ಠಿತ ರಾಷ್ಟ್ರೀಯ ಜಿಯೋಸ್ಪೇಷಿಯಲ್ ಪ್ರಶಸ್ತಿ–2026ಕ್ಕೆ ಆಯ್ಕೆಯಾಗಿದೆ.
ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ವಿಶ್ವವಿದ್ಯಾಲಯ – ರಾಷ್ಟ್ರೀಯ (ಜ್ಯೂರಿ) ಪ್ರಶಸ್ತಿ’ (Best University National – Jury Award) ಲಭಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಎಂ.ಎಸ್ಸಿ. ಜಿಯೋಇನ್ಫರ್ಮ್ಯಾಟಿಕ್ಸ್ ಕಾರ್ಯಕ್ರಮದ ಸಂಯೋಜಕ ಸುರೇಶ್ ಲಮಾಣಿ ಅವರು ಜಿಯೋಸ್ಪೇಷಿಯಲ್ ಶಿಕ್ಷಣ, ಸಾಮರ್ಥ್ಯವರ್ಧನೆ ಹಾಗೂ ಜನಸಾಮಾನ್ಯರಲ್ಲಿ ತಂತ್ರಜ್ಞಾನದ ಅರಿವು ಮೂಡಿಸುವ ಕ್ಷೇತ್ರಗಳಲ್ಲಿನ ಕೊಡುಗೆಗಾಗಿ ‘ನ್ಯಾಷನಲ್ ಜಿಯೋಸ್ಪೇಷಿಯಲ್ ಎಮರ್ಜಿಂಗ್ ಫ್ಯಾಕಲ್ಟಿ ಫೆಲೋ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಎರಡೂ ಪ್ರಶಸ್ತಿಗಳನ್ನು ಡಿ. 1ರಂದು ಐಐಟಿ ಬಾಂಬೆಯಲ್ಲಿ ನಡೆಯಲಿರುವ ಮುಕ್ತ ಮೂಲಾಧಾರಿತ ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತದೆ.
ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು, ರಾಷ್ಟ್ರೀಯ ಮನ್ನಣೆಯು ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ನಾವೀನ್ಯತೆ ಹಾಗೂ ಸುಸ್ಥಿರ ಗ್ರಾಮೀಣಾಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ವಿಶ್ವವಿದ್ಯಾಲಯ ಹೊಂದಿರುವ ಬದ್ಧತೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಒಂದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಅಧ್ಯಾಪಕರಿಗೆ ವೈಯಕ್ತಿಕ ಪ್ರಶಸ್ತಿ ಲಭಿಸಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ಮೈಲಿಗಲ್ಲಾಗಿದೆ. ಜಿಯೋಸ್ಪೇಷಿಯಲ್ ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಕೊಡುಗೆಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಂತಾಗಿದೆ









