ಬೆಂಗಳೂರು: ಖಾಲಿ ನಿವೇಶನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನೀಡಿದರೆ 15ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ರಾಜ್ಯ ಸರ್ಕಾರದ ಹೊಸ ಪಾರ್ಕಿಂಗ್ ನೀತಿ ಚರ್ಚೆಗೆ ಕಾರಣವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸರು ಸೇರಿ ರೂಪಿಸುತ್ತಿರುವ “ಪಾರ್ಕಿಂಗ್ ನೀತಿ–2026” ಕರಡು ಪ್ರಕಟವಾಗುವ ಮುನ್ನವೇ ಈ ಯೋಜನೆಗೆ ಸಂಬಂಧಿಸಿದಂತೆ ಆಸ್ತಿ ಮಾಲೀಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಪ್ರಸ್ತಾವನೆಯ ಪ್ರಕಾರ, ಖಾಲಿ ನಿವೇಶನಗಳಲ್ಲಿ ಮಲ್ಟಿ-ಸ್ಟೋರಿ ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ ದೀರ್ಘಾವಧಿಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಇದರಿಂದ ತಮ್ಮ ಖಾಸಗಿ ಜಾಗದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿ ಇದೆ ಎಂದು ಕೆಲ ಮಾಲೀಕರು ಆರೋಪಿಸಿದ್ದಾರೆ.
ಇನ್ನು ಕೆಲವರು ಈ ಯೋಜನೆಯನ್ನು ಬೆಂಬಲಿಸುತ್ತಿದ್ದು, ವರ್ಷಗಳಿಂದ ಬಳಕೆಯಾಗದೇ ಇರುವ ನಿವೇಶನಗಳಿಂದ ಆದಾಯ ಪಡೆಯಲು ಇದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಈ ಯೋಜನೆ ಜಾರಿಗೆ ಬಂದರೆ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ಖಾಸಗಿ ಮಾಲೀಕರಿಗೂ ದೀರ್ಘಾವಧಿ ಆದಾಯದ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಯೋಜನೆ ಕುರಿತು ಅಂತಿಮ ತೀರ್ಮಾನ ಹೊರಬರುವ ಮುನ್ನವೇ ಚರ್ಚೆಗಳು ಜೋರಾಗಿದೆ.



