ಜೂನಿಯರ್ ಎನ್ಟಿಆರ್ ಅವರ ಜನ್ಮದಿನದಂದು ಹೊಂಬಾಳೆ ಫಿಲ್ಮ್ಸ್ ನೀಡಿದ ವಿಶೇಷ ಶುಭಾಶಯ ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಡ್ರ್ಯಾಗನ್’ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಬಳಿಕ ಹೊಂಬಾಳೆ ಫಿಲ್ಮ್ಸ್ ಅದನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿದ್ದು, ಇದರ ಹಿಂದೆ ದೊಡ್ಡ ಸಿನಿಮಾ ಡೀಲ್ ಅಡಗಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ಸಾಮಾನ್ಯವಾಗಿ ನಿರ್ಮಾಣ ಸಂಸ್ಥೆಗಳು ತಮ್ಮ ಜೊತೆ ಸಿನಿಮಾ ಮಾಡಿರುವ ಅಥವಾ ಭವಿಷ್ಯದಲ್ಲಿ ಕೆಲಸ ಮಾಡುವ ಹೀರೋಗಳಿಗೆ ಮಾತ್ರ ಈ ರೀತಿಯ ವಿಶೇಷ ಪೋಸ್ಟ್ ಮಾಡುತ್ತವೆ. ಇದೇ ಕಾರಣಕ್ಕೆ ಹೊಂಬಾಳೆ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ಕುರಿತು ಹೊಸ ಊಹಾಪೋಹಗಳು ಆರಂಭವಾಗಿವೆ.
ಪ್ರಭಾಸ್ ಅಭಿನಯದ ‘ಸಲಾರ್’ ಮೂಲಕ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಈಗ ತೆಲುಗು ಚಿತ್ರರಂಗದಲ್ಲೂ ತನ್ನ ಬಲ ಹೆಚ್ಚಿಸುತ್ತಿದೆ. ಜೂನಿಯರ್ ಎನ್ಟಿಆರ್ ಜೊತೆ ಭಾರಿ ಬಜೆಟ್ ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಕುತೂಹಲವೂ ಹೆಚ್ಚಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇನ್ನೊಂದೆಡೆ, ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದ ಕರ್ನಾಟಕ ಹಾಗೂ ವಿದೇಶಿ ವಿತರಣೆ ಹಕ್ಕುಗಳನ್ನು ಹೊಂಬಾಳೆ ಪಡೆದುಕೊಂಡಿದೆ. ‘ಡ್ರ್ಯಾಗನ್’ ಚಿತ್ರದ ಬಿಡುಗಡೆ ಮತ್ತು ವಿತರಣೆ ಜವಾಬ್ದಾರಿಯನ್ನೂ ಹೊಂಬಾಳೆ ವಹಿಸಿಕೊಳ್ಳಬಹುದು ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಜೋರಾಗಿವೆ.



