ಬೆಂಗಳೂರು: ಬಿಜೆಪಿ ನಾಯಕರು ಒಂದು ದಿನದ ಫೋಟೋ ಶೂಟ್ ಬಿಟ್ಟು ಪ್ರತಿನಿತ್ಯ ಮೆಟ್ರೋ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು. ಸರ್ಕಾರಿ ಗೃಹ ಕಚೇರಿ ಕುಮಾರಪಾರ್ಕ್ ನಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಗುರುವಾರ ಮಾತನಾಡಿದರು.
ತಿರುಪತಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಪ್ರಾರ್ಥನೆ ಮಾಡಿರುವುದಾಗಿ ಹೇಳಿದ್ದೀರಿ, ಬೇರೆ ಏನು ಪ್ರಾರ್ಥನೆ ಮಾಡಿಕೊಳ್ಳಲಿಲ್ಲವೇ ಎಂದು ಕೇಳಿದಾಗ, “ಮಾಂಗಲ್ಯ ಎಂಬುದು ನಮ್ಮ ಧರ್ಮದ ಸಂಕೇತ. ಹೆಣ್ಣು ಗಂಡು ಸೇರಿ ವಧು ವರರಾಗುತ್ತಾರೆ, ಅಕ್ಕಿ ಹಾಗೂ ಅರಿಶಿನ ಸೇರಿ ಮಂತ್ರಾಕ್ಷತೆಯಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹೆಣ್ಣು ಹಾಗೂ ಗಂಡಿನ ನಡುವೆ ಬಾಂಧವ್ಯ ಬೆಸೆಯುವುದು ಮಾಂಗಲ್ಯ.
ಅದು ದೇವಾನು ದೇವತೆಗಳ ಕಾಲದಿಂದ ನಡೆದುಕೊಂಡು ಬಂದಿದೆ. ನಾವು ದೇವರಿಗೂ ಮಾಗಲ್ಯ ಹಾಕಿರುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಮಾಂಗಲ್ಯವನ್ನು ಖರೀದಿ ಮಾಡಬೇಡ ಎಂದರೆ ಹೇಗೆ? ನೀವು ದುಡಿದ ಹಣದಲ್ಲಿ ನೀವು ಅದನ್ನು ಖರೀದಿ ಮಾಡಿರುತ್ತೀರಿ. ನೀವು ಮದುವೆಯಾಗುವಾಗಲೂ ಚಿನ್ನ ಖರೀದಿ ಮಾಡಬೇಡ, ತಾಳಿ ಕಟ್ಟಬೇಡ ಅರಿಶಿನ ಕೊಂಬು ಕಟ್ಟಿಕೊಳ್ಳಿ ಎಂದರೆ ಹೇಗೆ? ನಿಮ್ಮ ಕೈಯಲ್ಲಿ ಬೆಲೆ ಏರಿಕೆ ತಡೆಯಲು ಆಗಲಿಲ್ಲ,
ಅಡುಗೆ ಎಣ್ಣೆ, ಇಂಧನ ಕಡಿಮೆ ಬಳಸಿ ಎನ್ನುತ್ತಿದ್ದಾರೆ. ಇವರು ಒಂದೆರಡು ದಿನ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಸೋಮಣ್ಣ ಹಾಗೂ ಇತರೆ ಸಚಿವರು ಹಾಗೂ ಬಿಜೆಪಿ ನಾಯಕರು ದಿನನಿತ್ಯ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ? ಅವರು ಓಡಾಡುವುದಾದರೆ ನಮ್ಮ ಅಭ್ಯಂತರವಿಲ್ಲ. ಅವರು ಪೆಟ್ರೋಲ್, ಡೀಸೆಲ್ ಉಳಿಸಲಿ, ಎವರು ಅಡುಗೆ ಎಣ್ಣೆ ಬಳಸಿದ ಆಹಾರ ತಿನ್ನುವುದೇ ಬೇಡ. ವಿದೇಶ ಪ್ರವಾಸ ಮಾಡಬೇಡ ಎಂದಿದ್ದಾರೆ. ಅವರು ವಿದೇಶ ಪ್ರವಾಸ ಹೋಗಿರುವುದನ್ನು ನಾನು ಪ್ರಶ್ನೆ ಮಾಡುವುದಿಲ್ಲ” ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳು ಇತಿಹಾಸ ಸೃಷ್ಟಿಸಿವೆ
“ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1.34 ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡಿದ್ದು, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ. ಆ ಮೂಲಕ ಇಡೀ ದೇಶದಲ್ಲೇ ಇತಿಹಾಸ ಸೃಷ್ಟಿಸಿದೆ. ನಮ್ಮ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಆಕ್ಸ್ ಫರ್ಡ್ ವಿವಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದು, ಈ ಅಧ್ಯಯನದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು Shining a Light in the darkness (ಕತ್ತಲೆಯಲ್ಲಿ ಮೂಡಿದ ಬೆಳಕು) ಎಂದು ಬಣ್ಣಿಸಿದ್ದಾರೆ.
ನಮ್ಮ ಈ ಕಾರ್ಯಕ್ರಮ ದೇಶಕ್ಕೆ ಮಾದರಿ. ನಮ್ಮ ಯೋಜನೆಗಳನ್ನು ಟೀಕೆ ಮಾಡುತಿದ್ದ ಬಿಜೆಪಿ ಮಹಾರಾಷ್ಟ್ರ, ಮಧ್ಯಪ್ರದೇಶ ಹರಿಯಾಣ, ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತಂದಿದ್ದಾರೆ. ಚುನಾವಣೆ ಗೆಲ್ಲಲು ನಮ್ಮ ಮಾದರಿಯನ್ನು ಅನುಸರಿಸುತ್ತಿದ್ದಾರೆ. ತಮ್ಮದೇ ಆದ ಯೋಜನೆಗಳನ್ನು ಜಾರಿ ಮಾಡದೇ, ಕಾಂಗ್ರೆಸ್ ಕಾರ್ಯಕ್ರಮಗಳನ್ನು ಅನುಸರಿಸುತ್ತಿರುವುದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
“ನಮ್ಮ ಸಾಧನೆ ನಮಗೆ ತೃಪ್ತಿ ತಂದಿದೆ. ಗೃಹಲಕ್ಷ್ಮಿ ಮೂಲಕ 1.24 ಕೋಟಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರದಂತೆ 69,793 ಕೋಟಿ ವಿನಿಯೋಗಿಸಲಾಗಿದೆ. ಗೃಹಜ್ಯೋತಿಯಿಂದ 1.64 ಕೋಟಿ ಕುಟುಂಬಗಳು ಉಪಯೋಗ ಪಡೆದಿದ್ದು ಇದಕ್ಕೆ 26,115 ಕೋಟಿ ವೆಚ್ಚವಾಗಿದೆ.
ಶಕ್ತಿ ಯೋಜನೆ ಮೂಲಕ ಮಹಿಳೆಯರು 726 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದು 18,943 ಕೋಟಿ ವೆಚ್ಚ ಮಾಡಲಾಗಿದೆ. ಅನ್ನಭಾಗ್ಯದಿಂದ 4.4 ಕೋಟಿ ಜನರಿಗೆ ಉಪಯೋಗವಾಗಿದ್ದು 11,821 ಕೋಟಿ ವೆಚ್ಚ. ಯುವನಿಧಿಗೆ 950 ಕೋಟಿ ವೆಚ್ಚವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ” ಎಂದು ಹೇಳಿದರು.
“ನಾವು ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡಿದ್ದು, ಕಂದಾಯ ಇಲಾಖೆಯಿಂದ ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ಬೆಂಗಳೂರಿನಲ್ಲಿ ಈ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಬೆಂಗಳೂರಿನ 23 ಲಕ್ಷ ಜನರಿಗೆ ಇ ಖಾತಾ, ತಾಂಡಾ ಹಾಗೂ ಬೇರೆ ಭಾಗದ ಜನರಿಗೆ ಹಕ್ಕುಪತ್ರಗಳನ್ನು ಉಚಿತವಾಗಿ ವಿತರಣೆ ಮಾಡಿದ್ದೇವೆ.
ಬೆಂಗಳೂರಿನಲ್ಲಿ 7 ಲಕ್ಷ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಬಿ ಖಾತಾಯಿಂದ ಎ ಖಾತಾಗೆ ಮಾರ್ಗಸೂಚಿ ದರದ ಕೇವಲ 2% ಶುಲ್ಕದಲ್ಲಿ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ನನ್ನ ಇ ಖಾತಾ ಅಭಿಯಾನದಲ್ಲಿ 100 ದಿನಗಳಲ್ಲಿ ಅರ್ಜಿ ಹಾಕಿದವರಿಗೆ ಈ ರಿಯಾಯಿತಿ ನೀಡಲಾಗಿದ್ದು, ಈ ಶುಲ್ಕವನ್ನು ಪಾವತಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಇದು ನಮ್ಮ ಸರ್ಕಾರದ ಕ್ರಾಂತಿಕಾರಿ ತೀರ್ಮಾನ ಇದಾಗಿದೆ” ಎಂದರು.



