HomeGadag Newsಪುರಸಭೆ ಜಾಗದಲ್ಲೇ ಗೋಹತ್ಯೆ ಆರೋಪ!

ಪುರಸಭೆ ಜಾಗದಲ್ಲೇ ಗೋಹತ್ಯೆ ಆರೋಪ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಳೆ ಆಸಾರ ಓಣಿಯ ಪುರಸಭೆ ಜಾಗೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಸಾಯಿಖಾನೆಯ ಬಳಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕಸಾಯಿಖಾನೆಯನ್ನು ಕೂಡಲೇ ಬಂದ್ ಮಾಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ನೀಡಿದ ದೂರಿನ ಪ್ರಕಾರ, ಬಲ್ಲ ಮೂಲಗಳ ಮಾಹಿತಿ ಮೇರೆಗೆ ಯುವಕರೊಂದಿಗೆ ಸ್ಥಳಕ್ಕೆ ತೆರಳಿದಾಗ 8ರಿಂದ 10 ಆಕಳುಗಳನ್ನು ಕಡಿಯಲಾಗುತ್ತಿರುವ ದೃಶ್ಯ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ. ಪ್ರಶ್ನಿಸಲು ಹೋದಾಗ ಕಸಾಯಿಖಾನೆಯಲ್ಲಿದ್ದವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ಯುವಕರು, ಆಕಳು, ಎತ್ತು ಹಾಗೂ ಎಮ್ಮೆಗಳನ್ನು ಕಡಿಯಲಾಗಿರುವ ದೃಶ್ಯಗಳನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ, ಉದ್ವಿಗ್ನ ವಾತಾವರಣ

ಘಟನಾ ಸ್ಥಳದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಸಾಯಿಖಾನೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಈ ವೇಳೆ ಓರ್ವ ಕಸಾಯಿಖಾನೆಯ ಸಿಬ್ಬಂದಿ ಅಂಗಡಿ ಬಂದ್ ಮಾಡಿ ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಬಸವರಾಜ ಚಕ್ರಸಾಲಿ ಮಾತನಾಡಿ, “ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಕ್ರಮ ಕಸಾಯಿಖಾನೆ, ಗೋ ಸಾಗಾಣಿಕೆ ಹಾಗೂ ಅನಧಿಕೃತ ಮಾಂಸ ಮಾರಾಟ ನಡೆಯುತ್ತಿದ್ದರೂ ಪುರಸಭೆ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.

ಸ್ಥಳೀಯರ ಪ್ರಕಾರ, ಪುರಸಭೆ ಜಾಗವನ್ನು ಹಲವು ವರ್ಷಗಳಿಂದ ಅಕ್ರಮವಾಗಿ ಬಳಸಲಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹಾಗೂ ದುರ್ವಾಸನೆ ಸಮಸ್ಯೆ ಹೆಚ್ಚಾಗಿದೆ ಎಂದು ದೂರಲಾಗಿದೆ.

ಕ್ರಮದ ಭರವಸೆ ನೀಡಿದ ಪೊಲೀಸರು

ಸಿಪಿಐ ಬಿ.ವೈ. ನ್ಯಾಮಗೌಡ ಹಾಗೂ ಪಿಎಸ್‌ಐ ನಾಗರಾಜ ಗಡದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಘಟನೆಯ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುತ್ತು ಕರ್ಜೆಕಣ್ಣವರ, ಅಮರೀಶ ಗಾಂಜಿ, ಪ್ರತಾಪ ಅಂಕಲಿ, ಪ್ರಾಣೇಶ ವ್ಯಾಪಾರಿ, ನವೀನ ಹಿರೇಮಠ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಚಿನ್ನು ಹಾಳದೋಳದ, ವಾಸು ಗೋಸಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಹಿಂದೂಗಳ ಪೂಜ್ಯನೀಯ ಆಕಳುಗಳನ್ನು ಹತ್ಯೆ ಮಾಡುತ್ತಿರುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ.”

ಈರಣ್ಣ ಪೂಜಾರ

ತಾಲೂಕು ಅಧ್ಯಕ್ಷ, ಶ್ರೀರಾಮ ಸೇನೆ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!