ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕ್ಕಮಕ್ಕಳಿಗೆ ನೀಡುವ ಲಸಿಕಾ ಚುಚ್ಚುಮದ್ದು ಪಡೆಯಲು ಬಂದ ತಾಯಂದಿರು ಮತ್ತು ಪಾಲಕರು ಗುರುವಾರ ಗಂಟೆಗಟ್ಟಲೆ ಕಾಯುವಂತಾದ ಘಟನೆ ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಸ್ಪಂದನೆಯ ಕೊರತೆಯಿಂದ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಹೆರಿಗೆಯಾದ ಒಂದು ದಿನದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಲಸಿಕೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಾಣಂತಿಯರು ಹಾಗೂ ತಾಯಂದಿರು ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಲಸಿಕೆ ನೀಡುವ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹಲವರು ಮಕ್ಕಳೊಂದಿಗೆ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಪಾಲಕರು ದೂರಿದರು.
ಪಾಲಕರು ಕಾರಣ ಕೇಳಿದಾಗ ಕೆಲ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿ ಮಾತನಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. “ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಸಿಬ್ಬಂದಿ ಬೇಜವಾಬ್ದಾರಿತನ ತೋರಿದ್ದಾರೆ” ಎಂದು ಗಿರೀಶ ಅಗಡಿ ಆರೋಪಿಸಿದರು.
ಗಾಳಿಯಾಡದ ಕೊಠಡಿಯಲ್ಲಿ ನೂರಾರು ತಾಯಂದಿರು ಹಸುಗೂಸುಗಳನ್ನು ತೊಡೆಯ ಮೇಲೆ ಹಾಕಿಕೊಂಡು ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದರು. ಮಕ್ಕಳಿಗೆ ಎದೆಹಾಲುಣಿಸಲು ಸಹ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಮುಜುಗರ ಅನುಭವಿಸುವಂತಾಯಿತು ಎಂದು ತಾಯಂದಿರು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಬಾಣಂತಿಯರು ಮತ್ತು ಹಸುಗೂಸುಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದರು.



