ಬೆಂಗಳೂರು: ನಟನೆಯಿಂದ ಕೆಲವು ವರ್ಷ ದೂರ ಉಳಿದಿದ್ದ ನಟಿ ಮೈತ್ರಿಯಾ ಗೌಡ ಇದೀಗ ನಿರ್ಮಾಪಕಿ ಮತ್ತು ಸಮಾಜಸೇವಕಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಮೂಲಕ ಸಮಾಜಮುಖಿ ಕೆಲಸಗಳ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಾಗಿ ಅವರು ಘೋಷಿಸಿದ್ದಾರೆ.
‘ಮೌರ್ಯ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಮೈತ್ರಿಯಾ ಗೌಡ, ಬಳಿಕ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ನಂತರ ಕೆಲವು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಸಕ್ರಿಯರಾಗಿದ್ದಾರೆ.
ಚಿತ್ರರಂಗದ ಹಲವಾರು ಗಣ್ಯರ ಸಮ್ಮುಖದಲ್ಲಿ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಉದ್ಘಾಟನೆಗೊಂಡಿದೆ. ಕಾರ್ಯಕ್ರಮದಲ್ಲಿ ಅನಿರುದ್ಧ್ ಜತ್ಕರ್, ಉದಯ್ ಮೆಹ್ತಾ, ಶರವಣ, ಯಶಸ್ ಸೂರ್ಯ, ರವಿಚೇತನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟ್ರಸ್ಟ್ ಆರಂಭದ ಬಗ್ಗೆ ಮಾತನಾಡಿದ ಮೈತ್ರಿಯಾ ಗೌಡ, ‘ನಾನು ಚಿಕ್ಕವಳಿದ್ದಾಗಲೇ ನಟನೆಯ ಜೊತೆಗೆ ಸಮಾಜ ಸೇವೆ ಮಾಡಬೇಕು ಅನ್ನೋ ಕನಸು ಇತ್ತು. ಅನಿರುದ್ಧ್ ಜತ್ಕರ್ ಅವರ ಸೇವಾ ಕಾರ್ಯಗಳು ಮತ್ತು ಉದಯ್ ಮೆಹ್ತಾ ಅವರ ಕೆಲಸದ ರೀತಿ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿದೆ’ ಎಂದು ಹೇಳಿದರು.
‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್ ಮೂಲಕ ಸಿನಿಮಾ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಹಾಗೂ ಬೀದಿ ಪ್ರಾಣಿಗಳ ರಕ್ಷಣೆಯಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.
ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಟ್ರಸ್ಟ್ ಉದ್ಘಾಟನೆಗೊಂಡಿರುವುದು ಮೈತ್ರಿಯಾ ಗೌಡ ಅವರಿಗೆ ಮತ್ತಷ್ಟು ವಿಶೇಷ ಕ್ಷಣವಾಗಿತ್ತು.



