ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಬಳಿ ನಡೆದಿದೆ.
ಮೃತರನ್ನು ಚಾಮರಾಜನಗರ ಜಿಲ್ಲೆಯ ಸಂತೆಮರಳಿ ಸಮೀಪದ ತಮರವಾಡಿ ಗ್ರಾಮದ ಮೊಹನ್ ಕುಮಾರ್ ಹಾಗೂ ಮೈಸೂರಿನ ಜಯಪುರ ಸಮೀಪದ ಕೆಳಹಳ್ಳಿ ಗ್ರಾಮದ ರವಿಚಂದ್ರ ಎಂದು ಗುರುತಿಸಲಾಗಿದೆ. ಇಬ್ಬರೂ 21 ವರ್ಷದವರಾಗಿದ್ದಾರೆ.
ಮೈಸೂರಿನ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಯುವಕರು, ಐಟಿಐ ಶಿಕ್ಷಣ ಮುಗಿಸಿ ಉದ್ಯೋಗದಲ್ಲಿದ್ದರು. ತಮ್ಮ ಸ್ನೇಹಿತ ವಿಕಾಸ್ ಜೊತೆಗೂಡಿ ಮೂವರು ಬಲಮುರಿ ಪ್ರವಾಸಿ ತಾಣಕ್ಕೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ವೇಳೆ ಮೊಹನ್ ಕುಮಾರ್ ಮತ್ತು ರವಿಚಂದ್ರ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ವಿಕಾಸ್ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಸಹಾಯದಿಂದ ಕೆಆರ್‌ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ವೃತ್ತ ನಿರೀಕ್ಷಕ ವಿವೇಕಾನಂದ, ಪಿಎಸ್ಐ ರಮೇಶ್ ಕರ್ಕಿಕಟ್ಟೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳೀಯ ನುರಿತ ಈಜುಗಾರರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



