ಕೊಪ್ಪಳ: ಪರಿಸರ ಮಾಲಿನ್ಯದಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ ಎಂಬ ಆರೋಪಗಳ ನಡುವೆ ಕೊಪ್ಪಳ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದ್ದು, ತಾಲೂಕಿನ ಎರಡು ಪ್ರಮುಖ ಕಾರ್ಖಾನೆಗಳನ್ನು ಸೀಜ್ ಮಾಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆದಿದ್ದು, ಸಾರ್ವಜನಿಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಾಲುವರ್ತಿ ಸಮೀಪದ ಪಿಬಿಎಸ್-1 ಕಾರ್ಖಾನೆ ಮತ್ತು ಅಲ್ಲಾನಗರ ವ್ಯಾಪ್ತಿಯ ಹೊಸಪೇಟೆ ಇಸ್ಪಾತ್ ಕಾರ್ಖಾನೆಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಪರಿಸರ ನಿಯಮ ಉಲ್ಲಂಘನೆ ಹಾಗೂ ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಂಡಿದೆ.
ಕಾರ್ಖಾನೆಗಳಿಂದ ಹೊರಸೂಸುತ್ತಿದ್ದ ಹೊಗೆ ಮತ್ತು ದೂಳಿನಿಂದ ಕೃಷಿ ಜಮೀನುಗಳು, ಕುಡಿಯುವ ನೀರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
ಕಳೆದ ತಿಂಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಒಟ್ಟು ಐದು ಕಾರ್ಖಾನೆಗಳಿಗೆ ಕ್ಲೋಸರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಇದೀಗ ಅದರ ಭಾಗವಾಗಿ ಎರಡು ಕಾರ್ಖಾನೆಗಳಿಗೆ ಸೀಲ್ ಹಾಕಲಾಗಿದೆ.
ಆದರೆ ಜಿಲ್ಲಾಡಳಿತದ ಕ್ರಮದ ಬಗ್ಗೆ ಪ್ರಶ್ನೆಗಳೂ ಕೇಳಿಬರುತ್ತಿವೆ. ಸೀಜ್ ಮಾಡಲಾಗಿರುವ ಹೊಸಪೇಟೆ ಇಸ್ಪಾತ್ ಕಾರ್ಖಾನೆ ಕಳೆದ ಒಂದು ವರ್ಷದಿಂದಲೇ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ಮಾಹಿತಿ ಹರಿದಾಡುತ್ತಿದೆ.
ಹೀಗಾಗಿ ಈಗಾಗಲೇ ಬಂದ್ ಆಗಿದ್ದ ಘಟಕವನ್ನು ಸೀಜ್ ಮಾಡಿ ಅಧಿಕಾರಿಗಳು ಕೇವಲ ತೋರಿಕೆಗೆ ಕ್ರಮ ಕೈಗೊಂಡರಾ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ದಿನನಿತ್ಯ ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ ಉಳಿದ ಮೂರು ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಯಾವಾಗ ಎನ್ನುವ ಪ್ರಶ್ನೆ ಇದೀಗ ತೀವ್ರವಾಗಿದೆ.



