ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ನದಿ ನೀರಿನ ಪೈಪ್ ನಮ್ಮ ಬಡಾವಣೆಯಲ್ಲೇ ಹಾದು ಹೋಗುತ್ತದೆ… ಆದರೆ 20 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮನೆ ಮುಂದೆ ಚರಂಡಿ ನೀರು ಹರಿಯುತ್ತದೆ…” — ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ಆಕ್ರೋಶಗೊಂಡ ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು ಬುಧವಾರ ಪುರಸಭೆಗೆ ದಿಡೀರ್ ದೌಡಾಯಿಸಿ ಅಸಮಾಧಾನ ಹೊರಹಾಕಿದರು.
ಪಟ್ಟಣದ ಗಡ್ಡದೇವರಮಠ ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ನಿವಾಸಿಗಳು, “ನದಿ ನೀರು ಪೂರೈಕೆಯ ಪೈಪ್‌ಲೈನ್ ನಮ್ಮ ಭಾಗದಲ್ಲಿಯೇ ಹಾದು ಹೋಗಿದ್ದರೂ 20 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇರುವ ಬೋರ್‌ವೆಲ್‌ನಿಂದಲೂ ಸಮರ್ಪಕ ನೀರು ಸಿಗುತ್ತಿಲ್ಲ. ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ಬಂದಾಗ ಬಡಾವಣೆಯಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಎದೆಯತ್ತರ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಗಳು ಕೆಸರುಮಯವಾಗುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಮುಂದೆ ನೀರು ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ತಕ್ಷಣವೇ ರಸ್ತೆ ದುರಸ್ತಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.
ನಿವಾಸಿಗಳ ಅಹವಾಲು ಆಲಿಸಿದ ಪುರಸಭೆ ಅಧಿಕಾರಿಗಳು ಹಾಗೂ ನೀರು ಸರಬರಾಜು ಇಲಾಖೆ ಮೇಲ್ವಿಚಾರಕ ಪರಶುರಾಮ ಮುಳಗುಂದ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ವಿರೂಪಾಕ್ಷಪ್ಪ ಹಡಪದ, ಮಂಜುನಾಥ ಬಳಗಾನೂರ, ಭಾಷಾಸಾಬ ಬೂದಿಹಾಳ, ಕಿರಣ ಬಳಗಾನೂರ, ಎಚ್.ಎ. ಬಹದ್ದೂರ, ವೈ.ಎಂ. ನಾಲಬಂದ, ಚನ್ನವ್ವ ಕಮತದ, ನಿರ್ಮಲ ಹೊಸಮನಿ, ದಾವಲಬಿ ಬಾಗಲಕೋಟ, ಸಾಹೇರಾ ಗುಡಗೇರಿ, ಮಲ್ಲವ್ವ ಗಡದವರ, ಜೈತುನಬಿ ದೊಡ್ಡಮನಿ, ನೀಲವ್ವ ಮಾವನೂರ, ವಿನೋದಾ ಬೋರೆ, ನಿಂಗವ್ವ ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“20 ದಿನಕ್ಕೊಮ್ಮೆ ನೀರು ಬರುತ್ತಿದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮೂಲಭೂತ ಸೌಲಭ್ಯಕ್ಕಾಗಿ ಪುರಸಭೆಗೆ ಬರಬೇಕಾದ ಸ್ಥಿತಿ ಬಂದಿದೆ.”
ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು



