ವಿಜಯಸಾಕ್ಷಿ ಸುದ್ದಿ, ಗದಗ: “ಹಿಂದೂ ಸಮಾವೇಶವನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಕನ್ಹೇರಿ ಶ್ರೀಗಳ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಅಪಪ್ರಚಾರ ಬಿಟ್ಟು ಮೇ 31ರಂದು ನಡೆಯುವ ಹಿಂದೂ ಸಮಾವೇಶಕ್ಕೆ ಬನ್ನಿ” ಎಂದು ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಶಿವಶರಣ ಮಾದರ ಚೆನ್ನಯ್ಯ ಶ್ರೀಗಳನ್ನು ಆರ್‌ಎಸ್‌ಎಸ್ ಸ್ವಾಮೀಜಿ ಎಂದು ನಿಂದಿಸಲಾಗಿತ್ತು. ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಲಾಗಿದೆ. ಬೆಳಿಗ್ಗೆ ಮೂಢನಂಬಿಕೆ ವಿರೋಧದ ಮಾತು ಹೇಳುವವರು ರಾತ್ರಿ ಮನೆಗೆ ಹೋಗಿ ಪೂಜೆ–ಪುನಸ್ಕಾರ ಮಾಡುತ್ತಾರೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ” ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹಾಗೂ ಅವರ ತಂಡದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ 68 ಸಂಘಟನೆಗಳ ಸಹಯೋಗದಲ್ಲಿ ಪಕ್ಷಾತೀತವಾಗಿ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ. ಕೆಲವರು ಜಾತಿ–ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
“ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಹುನ್ನಾರದ ವಿರುದ್ಧ ಈ ಸಮಾವೇಶ ನಡೆಯುತ್ತಿದೆ. ‘ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ’ ಎಂಬ ಸಂದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದರು.
“ತೋಂಟದಾರ್ಯ ಮಠವನ್ನು ಜಾತಿಗೆ ಸೀಮಿತಗೊಳಿಸುವ ಯತ್ನ
ತೋಂಟದಾರ್ಯ ಮಠದ ಬಗ್ಗೆ ಅಪಾರ ಭಕ್ತಿ ಇದೆ. ಆದರೆ ಕೆಲವರು ಮಠವನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮನ್ನು ತಾವು ಚಿಂತಕರು ಎಂದು ಕರೆದುಕೊಳ್ಳುವವರು ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈ ವೇಳೆ ಮಂಜುನಾಥ ಕೊಟ್ನಿಕಲ್, ಕುಮಾರ ನಡಗೇರಿ, ಸತೀಶ್ ಕುಂಬಾರ, ರಾಘವೇಂದ್ರ ಪರಾಪೂರ, ಪಿ.ಎಸ್. ಕಾಳೆ, ಮೌನೇಶ್ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಭಜಂತ್ರಿ, ಈರಪ್ಪ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಸ್ವರೂಪ ಹುಳ್ಳಿಕಾಶಿ, ವೆಂಕಟೇಶ್ ದೊಡ್ಡಮನಿ ಉಪಸ್ಥಿತರಿದ್ದರು.



