ವಿಜಯಸಾಕ್ಷಿ ಸುದ್ದಿ, ಗದಗ: ಯಶವಂತಪುರ–ವಿಜಯಪುರ ನಡುವಿನ ವಿಶೇಷ ರೈಲುಗಳಿಗೆ ಗದಗ ಬೈಪಾಸ್ ಬದಲು ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.
ಈ ಕುರಿತು ನೈಋತ್ಯ ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಟ್ರೇನ್ ನಂ. 06577 ಯಶವಂತಪುರ–ವಿಜಯಪುರ ಹಾಗೂ ಟ್ರೇನ್ ನಂ. 06578 ವಿಜಯಪುರ–ಯಶವಂತಪುರ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕ ಸಂಚರಿಸಿ ನಿಲುಗಡೆ ಆದರೆ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಮಧ್ಯರಾತ್ರಿ ವೇಳೆಯಲ್ಲಿ ಸಂಚರಿಸುವ ಈ ರೈಲುಗಳು ಗದಗ ಬೈಪಾಸ್‌ನಲ್ಲಿ ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಬೈಪಾಸ್ ನಿಲ್ದಾಣದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲ ಎಂದು ದೂರಿದ್ದಾರೆ.
ಕೇವಲ 20 ನಿಮಿಷಗಳ ವಿಳಂಬ ತಪ್ಪಿಸಲು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ. ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ನೀಡಿದರೆ ಹಾವೇರಿ, ದಾವಣಗೆರೆ, ತುಮಕೂರು, ಬೆಂಗಳೂರು ಕಡೆಗೆ ತೆರಳುವವರಿಗೆ ಹಾಗೂ ಬಾಗಲಕೋಟೆ, ಆಲಮಟ್ಟಿ, ವಿಜಯಪುರ ಕಡೆ ಸಂಚರಿಸುವವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಗದಗ ಬೈಪಾಸ್ ಎಂಬ ಹೆಸರನ್ನು ಬದಲಿಸಿ “ಗಂಗಿಮಡಿ ರೈಲು ನಿಲ್ದಾಣ” ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹಜರತ್ ನಿಜಾಮುದ್ದೀನ್ ರೈಲುಗೂ ಗದಗ ಹಾಗೂ ಬಾಗಲಕೋಟೆಯಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಆರಂಭಿಸಿದರೆ ಈ ಭಾಗದ ಜನರ ಪ್ರಯಾಣ ಸಮಸ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
“ಗದಗ ಮೇನ್ ಜಂಕ್ಷನ್‌ನಲ್ಲಿ ರೈಲು ನಿಲುಗಡೆ ನೀಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೈಪಾಸ್‌ನಲ್ಲಿ ನಿಲುಗಡೆ ಮಾಡುವುದು ಜನರಿಗೆ ಸಂಕಷ್ಟ ತಂದೊಡ್ಡಿದೆ.”ವಿಶ್ವನಾಥ ಖಾನಾಪೂರಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ



