ವಿಜಯಸಾಕ್ಷಿ ಸುದ್ದಿ, ಗದಗ: ಹಿಂದುತ್ವವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾದ ಪರಿಕಲ್ಪನೆಯಲ್ಲ, ಅದು ಸಹೋದರತ್ವ, ಸಹಬಾಳ್ವೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಜೀವನದರ್ಶನವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗೋಪಿ ಜಿ ಹೇಳಿದರು.
ಹಿಂದುತ್ವವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾದ ಪರಿಕಲ್ಪನೆಯಲ್ಲ, ಅದು ಸಹೋದರತ್ವ, ಸಹಬಾಳ್ವೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಜೀವನದರ್ಶನವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗೋಪಿ ಜಿ ಹೇಳಿದರು.
ನಗರದ ಸೇವಾ ಚೇತನ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗದಗ ಜಿಲ್ಲಾ ಘಟಕವು ‘100 ವರ್ಷಗಳ ಸಂಘಯಾತ್ರೆ’ ಅಂಗವಾಗಿ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ವಸುದೈವ ಕುಟುಂಬಕಂ” ಹಾಗೂ “ಸರ್ವೇ ಭವಂತು ಸುಖಿನಃ” ಎಂಬ ಭಾರತೀಯ ತತ್ವಗಳು ವಿಶ್ವಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತವೆ ಎಂದು ಅವರು ತಿಳಿಸಿದರು.
ಸಂಘ ಪ್ರತಿಪಾದಿಸುತ್ತಿರುವ ‘ಪಂಚಪರಿವರ್ತನೆ’ ಪರಿಕಲ್ಪನೆಯಡಿ ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಮನೋಭಾವ ಹಾಗೂ ನಾಗರಿಕ ಕರ್ತವ್ಯಗಳ ಪಾಲನೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಭಾರತೀಯ ಕುಟುಂಬ ವ್ಯವಸ್ಥೆ, ಭಾಷೆ, ಸಂಸ್ಕೃತಿ ಮತ್ತು ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಳ್ಳಬೇಕು. ಜಾತಿ ವೈಮನಸ್ಸು ಮತ್ತು ವಿಭಜನೆಗೆ ಅವಕಾಶ ನೀಡದೆ ಪರಸ್ಪರ ಗೌರವ, ಸಹಕಾರ ಹಾಗೂ ಸಾಮರಸ್ಯದ ಮನೋಭಾವ ಬೆಳೆಸಿದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಂಘಚಾಲಕ ಮಾರುತಿ ಕಟ್ಟಿಮನಿ ಉಪಸ್ಥಿತರಿದ್ದರು. ರವಿ ಬಡಿಗೇರ ಸ್ವಾಗತಿಸಿದರು. ಡಾ. ಉಮೇಶ ಹಾದಿ ನಿರೂಪಿಸಿದರು. ಬಸವರಾಜ ಪಟ್ಟಣಶೆಟ್ಟಿ ವಂದಿಸಿದರು. ಗಣ್ಯರು, ಚಿಂತಕರು, ಸ್ವಯಂಸೇವಕರು ಹಾಗೂ ಭಗಿನಿಯರು ಪಾಲ್ಗೊಂಡಿದ್ದರು.
“ಹಿಂದುತ್ವವು ಧಾರ್ಮಿಕ ಆಚರಣೆಗೆ ಸೀಮಿತವಾದ ವಿಚಾರವಲ್ಲ; ಸಹೋದರತ್ವ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೀವನ ದರ್ಶನ.”
**— ಗೋಪಿ ಜಿ, ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘ**



