ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮೂಡಿರುವ ಅನುಮಾನಗಳನ್ನು ನಿವಾರಿಸಲು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅನಿಲ ಮೆಣಸಿನಕಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಡವರು, ಅನಾಥರು ಹಾಗೂ ವಿಶೇಷವಾಗಿ ದೃಷ್ಟಿಹೀನರಿಗೆ ಉಚಿತ ಶಿಕ್ಷಣ, ವಸತಿ ಮತ್ತು ಸಂಗೀತ ಶಿಕ್ಷಣ ನೀಡುವ ಮೂಲಕ ಮಠವು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದೆ. ಇಂತಹ ಪವಿತ್ರ ಸಂಸ್ಥೆಯ ಘನತೆ ಮತ್ತು ಭಕ್ತರ ನಂಬಿಕೆಗೆ ಯಾವುದೇ ಧಕ್ಕೆಯಾಗಬಾರದು ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಠದ ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಆಸ್ತಿಗಳ ನಿರ್ವಹಣೆ ಕುರಿತಂತೆ ವಿವಿಧ ರೀತಿಯ ಚರ್ಚೆಗಳು ಮತ್ತು ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದರಿಂದ ಭಕ್ತರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಠದ ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಆಸ್ತಿ ನಿರ್ವಹಣೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಸಂಬಂಧಿತ ತನಿಖಾ ಸಂಸ್ಥೆಗಳ ಮೂಲಕ ಪರಿಶೀಲನೆ ನಡೆಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.
ಮಠದ ಮೂಲ ಉದ್ದೇಶಗಳಾದ ಶಿಕ್ಷಣ, ಅನ್ನದಾಸೋಹ, ಸಂಗೀತ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಠದ ಗೌರವ, ಪರಂಪರೆ ಹಾಗೂ ಭಕ್ತರ ನಂಬಿಕೆಯನ್ನು ಉಳಿಸುವ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕು ಎಂದು ತಿಳಿಸಿದ್ದಾರೆ.
ತಪ್ಪುಗಳು ಕಂಡುಬಂದರೆ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಅಕ್ರಮ ಕಂಡುಬರದಿದ್ದರೆ ಸಾರ್ವಜನಿಕರಲ್ಲಿ ಸ್ಪಷ್ಟತೆ ಮೂಡಿಸುವ ಅಧಿಕೃತ ವರದಿಯನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಇದು ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧದ ಆರೋಪವಲ್ಲ. ಪುಟ್ಟರಾಜ ಗವಾಯಿಗಳ ಆದರ್ಶ, ಮಠದ ಪಾವಿತ್ರ್ಯ ಮತ್ತು ಲಕ್ಷಾಂತರ ಭಕ್ತರ ನಂಬಿಕೆಯನ್ನು ಉಳಿಸುವ ಉದ್ದೇಶದಿಂದ ಪಾರದರ್ಶಕ ತನಿಖೆಗೆ ಆಗ್ರಹಿಸುತ್ತಿದ್ದೇವೆ.”
– ಅನಿಲ ಮೆಣಸಿನಕಾಯಿ



