ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಮಾಡಿಸಿದ ಸಾವಿರಾರು ರೈತರಿಗೆ ಮಧ್ಯಂತರ ಪರಿಹಾರ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹರಾಗಿದ್ದರೂ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡದಿರುವುದು ಸರ್ಕಾರ ಹಾಗೂ ವಿಮಾ ಕಂಪನಿಗಳ ನಿರ್ಲಕ್ಷ್ಯ ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ ಆರೋಪಿಸಿದೆ.
ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಮಾಡಿಸಿದ ಸಾವಿರಾರು ರೈತರಿಗೆ ಮಧ್ಯಂತರ ಪರಿಹಾರ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹರಾಗಿದ್ದರೂ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡದಿರುವುದು ಸರ್ಕಾರ ಹಾಗೂ ವಿಮಾ ಕಂಪನಿಗಳ ನಿರ್ಲಕ್ಷ್ಯ ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ ಆರೋಪಿಸಿದೆ.
ಜಿಲ್ಲೆಯಲ್ಲಿ ಒಟ್ಟು 52,013 ರೈತರು ಬೆಳೆವಿಮೆ ಮಾಡಿಸಿದ್ದು, ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿ ಬೆಳೆ ನಷ್ಟ ಅನುಭವಿಸಿದ್ದಾರೆ. ನಿಯಮಾನುಸಾರ ಟೋಲ್‌ಫ್ರೀ ಸಂಖ್ಯೆಗೆ ದೂರು ಸಲ್ಲಿಸಿದ ರೈತರಿಗೆ ವಿಮಾ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಧ್ಯಂತರ ಪರಿಹಾರ ನೀಡಬೇಕಾಗಿತ್ತು.
ಸಂಘದ ಪ್ರಕಾರ, 38,177 ರೈತರು ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದರು. ಇವರಲ್ಲಿ ಮೊದಲ ಹಂತದಲ್ಲಿ 9,687 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 3,020 ರೈತರಿಗೆ ಮಾತ್ರ ಪರಿಹಾರ ಜಮೆಯಾಗಿದ್ದು, ಒಟ್ಟು 12,707 ರೈತರಿಗೆ ಮಾತ್ರ ಮಧ್ಯಂತರ ಪರಿಹಾರ ದೊರೆತಿದೆ.
ಇನ್ನೂ 22,356 ರೈತರು ಅರ್ಹರಾಗಿದ್ದರೂ ಪರಿಹಾರದಿಂದ ವಂಚಿತರಾಗಿದ್ದಾರೆ. ಅಲ್ಲದೆ 3,114 ರೈತರ ಜಮೀನುಗಳನ್ನು ಸಮರ್ಪಕ ಪರಿಶೀಲನೆ ನಡೆಸದೇ ‘ಪಾಳು ಭೂಮಿ’ ಎಂದು ನಮೂದಿಸಿ ಪರಿಹಾರವನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ವಿಮೆ ಸಮೀಕ್ಷೆ ವೇಳೆ ಅಧಿಕಾರಿಗಳು ಪ್ರತಿ ಜಮೀನಿನ ಸಮರ್ಪಕ ಪರಿಶೀಲನೆ ನಡೆಸದೆ, ಒಂದೇ ಸರ್ವೇ ನಂಬರ್ ಆಧರಿಸಿ ವರದಿ ಸಲ್ಲಿಸಿದ್ದರಿಂದ ಬೆಳೆ ಬೆಳೆದಿದ್ದ ಜಮೀನುಗಳನ್ನೂ ಪಾಳು ಎಂದು ದಾಖಲಿಸಿ ನೈಜ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತರು ದೂರಿದ್ದಾರೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಒಣ ಮೆಣಸಿನಕಾಯಿ ಹಾಗೂ ಗೋವಿನ ಜೋಳ ಬೆಳೆದ ರೈತರಿಗೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ಇನ್ನೂ ದೊರೆತಿಲ್ಲ. ಅಗತ್ಯ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸಿದ್ದರೂ ವಿಮಾ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆಗೆ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಕಳೆದ ಸಾಲಿನ ಬೆಳೆವಿಮೆ ಪರಿಹಾರ ಸಿಕ್ಕಿದ್ದರೆ ಅದು ಆಸರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಅರ್ಹ ರೈತರಿಗೆ ಶೀಘ್ರದಲ್ಲೇ ಬೆಳೆವಿಮೆ ಪರಿಹಾರ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ್ರ ಕರಮುಡಿ ಆಗ್ರಹಿಸಿದ್ದಾರೆ.
“ಅರ್ಹ ರೈತರಿಗೆ ಬೆಳೆವಿಮೆ ಪರಿಹಾರ ನೀಡದಿರುವುದು ಅನ್ನದಾತರ ಮೇಲಿನ ಅನ್ಯಾಯ. ಸರ್ಕಾರ ಹಾಗೂ ವಿಮಾ ಕಂಪನಿ ಕೂಡಲೇ ಬಾಕಿ ಇರುವ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು.”
ಯಲ್ಲಪ್ಪಗೌಡ್ರ ಕರಮುಡಿ, ಜಿಲ್ಲಾಧ್ಯಕ್ಷರು, ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ



