ಬೆಂಗಳೂರು: ರಸ್ತೆ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕನೊಬ್ಬನಿಗೆ ವಿಧಿಸಲಾಗಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಒಂದು ದಿನಕ್ಕೆ ಕಡಿತಗೊಳಿಸಿ ಮಹತ್ವದ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಅಜಾಗರೂಕತೆಯಿಂದ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಪರಿಷ್ಕರಿಸಿ, ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಮಾತ್ರ ಶಿಕ್ಷೆ ಅನುಭವಿಸುವಂತೆ ಪೀಠ ಸೂಚಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿರುವುದು ಶಿಕ್ಷೆ ಕಡಿತಗೊಳಿಸಲು ಪ್ರಮುಖ ಕಾರಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದಲ್ಲದೆ, ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೊಳಗಾಗಿ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದು, ಸದ್ಯ ವೃತ್ತಿಪರ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವುದೂ ದಾಖಲೆಗಳಿಂದ ತಿಳಿದುಬಂದಿದೆ ಎಂದು ಪೀಠ ಉಲ್ಲೇಖಿಸಿದೆ.
ನ್ಯಾಯಾಲಯದ ಸಲಹೆಯಂತೆ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಮೃತರ ಕುಟುಂಬದವರು ಸಹ ಒಪ್ಪಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮೃತರ ಪತ್ನಿ ಮತ್ತು ಮಗನಿಗೆ ಒಟ್ಟು 1 ಲಕ್ಷ ರೂ. ಹೆಚ್ಚುವರಿ ಪರಿಹಾರ ಪಾವತಿಸುವಂತೆ ನ್ಯಾಯಪೀಠ ಆದೇಶಿಸಿದೆ. ಈ ಮೊತ್ತವನ್ನು ತಲಾ 50 ಸಾವಿರ ರೂ.ಗಳಂತೆ ಎರಡು ಕಂತುಗಳಲ್ಲಿ ಜೂನ್ 30ರೊಳಗೆ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ಈ ಹಿಂದೆ ವಿಧಿಸಲಾಗಿದ್ದ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಜಾರಿಯಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
2015ರ ಜುಲೈ 15ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬೀಚ್ ರಸ್ತೆ ಬಳಿ ರಿಯಾಜ್ ಅಹ್ಮದ್ ಚಲಾಯಿಸುತ್ತಿದ್ದ ಕಾರು ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು.
ಅಪಘಾತದ ತಕ್ಷಣ ರಿಯಾಜ್ ಹಾಗೂ ಅವರ ಮಗ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಶೆಟ್ಟಿ ಮರುದಿನ ಸಾವನ್ನಪ್ಪಿದ್ದರು.
ಈ ಪ್ರಕರಣದಲ್ಲಿ ಮಂಗಳೂರಿನ ಸೆಷನ್ಸ್ ನ್ಯಾಯಾಲಯ ರಿಯಾಜ್‌ಗೆ ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.



