ನವದೆಹಲಿ: ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿರುವ ನಡುವೆ, ಪ್ರಮುಖ ಆರೋಪಿ ಹಾಗೂ ಪತಿ ಸಮರ್ಥ್ ಸಿಂಗ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ದೆಹಲಿ ಏಮ್ಸ್ ಮೂಲಕ ಎರಡನೇ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಪ್ರಕರಣ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ 10 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್, ಮಧ್ಯಪ್ರದೇಶದ ಸ್ಥಳೀಯ ಕೋರ್ಟ್‌ಗೆ ಹಾಜರಾಗಿದ್ದಾರೆ. ಮುಂಗಡ ಜಾಮೀನು ಅರ್ಜಿಯನ್ನು ಈಗಾಗಲೇ ಹಿಂಪಡೆದಿದ್ದ ಅವರು, ಬಂಧನ ಮತ್ತು ಕಠಿಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಶರಣಾಗುವ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತ್ವಿಶಾ ಶರ್ಮಾ ಕುಟುಂಬಸ್ಥರು ಆರಂಭದಿಂದಲೇ ಇದು ಆತ್ಮಹತ್ಯೆಯಲ್ಲ, ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದರು. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನಾಸ್ಪದ ಅಂಶಗಳಿದ್ದು, ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆ ಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆ ದೆಹಲಿ ಏಮ್ಸ್ ತಜ್ಞರಿಂದ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ. ಇದರ ಬೆನ್ನಲ್ಲೇ ಸಮರ್ಥ್ ಸಿಂಗ್ ಶರಣಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಮರ್ಥ್ ಸಿಂಗ್ ಕೋರ್ಟ್ ಆವರಣಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಹಾಗೂ ತನಿಖಾಧಿಕಾರಿಗಳು ಚುರುಕುಗೊಂಡಿದ್ದು, ಆತನನ್ನು ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಇದೀಗ ಎರಡನೇ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸ್ ವಿಚಾರಣೆಯ ಬಳಿಕ ತ್ವಿಶಾ ಶರ್ಮಾ ಅವರ ಸಾವಿನ ನಿಜವಾದ ರಹಸ್ಯ ಬಯಲಾಗುವ ನಿರೀಕ್ಷೆ ವ್ಯಕ್ತವಾಗಿದೆ.



