ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಈ ಚಿತ್ರದ ಮೂರನೇ ಹಾಡು ‘ಹೆಲ್ಲಲ್ಲಲ್ಲೋ’ ಪ್ರೋಮೋ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನಿರ್ದೇಶಕ ಬುಚ್ಚಿ ಬಾಬು ಸನಾ ಮತ್ತು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕಾಂಬಿನೇಷನ್‌ನ ಈ ಹಾಡು, ರಾ ಎನರ್ಜಿ ಮತ್ತು ಮ್ಯೂಸಿಕಲ್ ಮ್ಯಾಜಿಕ್‌ನ ಮಿಶ್ರಣವಾಗಿ ಮೂಡಿಬಂದಿದೆ. ಈಗಾಗಲೇ ಬಿಡುಗಡೆಯಾದ ಮೊದಲ ಎರಡು ಹಾಡುಗಳು ಸೂಪರ್ ಹಿಟ್ ಆಗಿದ್ದು, ಇದೀಗ ಮೂರನೇ ಹಾಡಿನ ಮೇಲೂ ಭಾರೀ ನಿರೀಕ್ಷೆ ಮೂಡಿದೆ.
ಪ್ರೋಮೋದಲ್ಲಿ ವೇದಿಕೆಯೊಂದರ ಮೇಲೆ ನೂರಾರು ಜನರ ನಡುವೆ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ಶ್ರುತಿ ಹಾಸನ್ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ರಾಮ್ ಚರಣ್ ರಗಡ್ ಲುಕ್‌ನಲ್ಲಿ ಮಿಂಚಿದ್ದರೆ, ಶ್ರುತಿ ಹಾಸನ್ ಗ್ಲಾಮರಸ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಜಾನ್ವಿ ಕಪೂರ್ ಕೂಡ ಸ್ಟೈಲಿಷ್ ಡ್ಯಾನ್ಸ್ ಮೂಲಕ ಫ್ಯಾನ್ಸ್ ಮನಗೆದ್ದಿದ್ದಾರೆ.
ಕ್ರೀಡಾ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಜೊತೆಗೆ ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಬಿಡುಗಡೆಯಾಗಿರುವುದು ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ಮಾತ್ರ. ಪೂರ್ಣ ಹಾಡನ್ನು ಮೇ 23ರಂದು ಭೋಪಾಲ್‌ನಲ್ಲಿ ನಡೆಯಲಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಜೂನ್ 3ರಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿವೆ.



