ಮಂಗಳಸೂತ್ರ ಮತ್ತು ಹಸಿರು ಬಳೆ ಧರಿಸಿ ಕಾಣಿಸಿಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಸೀಕ್ರೆಟ್ ಮ್ಯಾರೇಜ್ ರೂಮರ್ಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಕಂಗನಾ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದಾರೆ” ಎಂಬ ಚರ್ಚೆ ಜೋರಾಗಿದ್ದರೂ, ಈಗ ಅದಕ್ಕೆ ನಟಿಯೇ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಗುಲಾಬಿ ಬಣ್ಣದ ಡ್ರೆಸ್ನಲ್ಲಿ ಮಂಗಳಸೂತ್ರ ಧರಿಸಿ ಕಾರಿನತ್ತ ತೆರಳುತ್ತಿದ್ದ ಕಂಗನಾ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಮದುವೆ ಗಾಸಿಪ್ ಹಬ್ಬಿಸಿದ್ದರು. ಆದರೆ ಕಂಗನಾ ಇದನ್ನೆಲ್ಲಾ ತಳ್ಳಿಹಾಕಿದ್ದು, ಅದು ಸಿನಿಮಾದ ಕ್ಯಾರೆಕ್ಟರ್ ಲುಕ್ ಮಾತ್ರ ಎಂದು ಹೇಳಿದ್ದಾರೆ.
“ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ನೋಡಿ ಜನರು ಊಹಾಪೋಹ ಹರಡಿಸುತ್ತಿದ್ದಾರೆ. ನಾನು ನಟಿ. ಪಾತ್ರಕ್ಕಾಗಿ ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಳ್ಳಬೇಕು. ಅದನ್ನೇ ಮದುವೆ ಎಂದು ಕಲ್ಪಿಸಿಕೊಳ್ಳುವುದು ವಿಚಿತ್ರ. ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ” ಎಂದು ಕಂಗನಾ ಹೇಳಿದ್ದಾರೆ.
ಇದೇ ವೇಳೆ ಬಿಸಿಲಿನ ನಡುವೆ ನಡೆಯುತ್ತಿರುವ ಔಟ್ಡೋರ್ ಶೂಟಿಂಗ್ ಬಗ್ಗೆ ಮಾತನಾಡಿದ ಅವರು, “ಎಸಿ ರೂಮ್ನಲ್ಲಿ ಕುಳಿತು ಹವಾಮಾನ ಬಗ್ಗೆ ಮಾತನಾಡುವುದು ಸುಲಭ. ಆದರೆ ನಾವು ಬಿಸಿಲಿನ ಮಧ್ಯೆ ಕೆಲಸ ಮಾಡುತ್ತಿದ್ದೇವೆ. ಜೀವನ ಸವಾಲಿನಿಂದಲೇ ಸುಂದರವಾಗುತ್ತದೆ” ಎಂದು ಹೇಳಿದ್ದಾರೆ.
‘ಎಮರ್ಜೆನ್ಸಿ’ ಚಿತ್ರದ ಬಳಿಕ ಕಂಗನಾ ಇದೀಗ ‘ಭಾರತ್ ಭಾಗ್ಯ ವಿಧಾತ’ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂಬೈ ಉಗ್ರ ದಾಳಿಯ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರ ಜೂನ್ 12ರಂದು ತೆರೆಗೆ ಬರಲಿದೆ.



