ಚೆನ್ನೈ: ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದ್ದು, ಬಿಡುಗಡೆಗೆ ಇದ್ದ ಪ್ರಮುಖ ಅಡ್ಡಿ ನಿವಾರಣೆಯಾಗಿದೆ. ಆದರೆ ಚಿತ್ರಕ್ಕೆ ಅನುಮತಿ ನೀಡುವ ಮುನ್ನ ಸಿಬಿಎಫ್‌ಸಿ ಒಟ್ಟು 12 ಬದಲಾವಣೆಗಳನ್ನು ಕಡ್ಡಾಯಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ವಿಜಯ್ ಅವರ ರಾಜಕೀಯ ಪಕ್ಷ ‘ಟಿವಿಕೆ’ ಹೆಸರಿರುವ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಹಾಗೂ ರಾಷ್ಟ್ರಧ್ವಜ ಕಾಣಿಸುವ ದೃಶ್ಯವೊಂದನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.
ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕದ ಮುಖಪುಟ ಬದಲಾಯಿಸುವಂತೆ ಮತ್ತು ಅವರಿಗೆ ಸಂಬಂಧಿಸಿದ ಕೆಲವು ಸಂಭಾಷಣೆಗಳನ್ನು ತಿದ್ದುಪಡಿ ಮಾಡುವಂತೆ ನಿರ್ದೇಶಿಸಲಾಗಿದೆ.
ಇದರ ಜೊತೆಗೆ ಧಾರ್ಮಿಕ ಪದಗಳು, ಸದ್ದಾಂ ಹುಸೇನ್ ಗಲ್ಲು ಶಿಕ್ಷೆ ಕುರಿತ ಉಲ್ಲೇಖ, ಭಾರತದ ಬಗ್ಗೆ ಇರುವ ಕೆಲವು ಕಟು ಸಂಭಾಷಣೆಗಳು, ಮಹಿಳೆಯರ ದೇಹದ ಕುರಿತು ಆಕ್ಷೇಪಾರ್ಹ ಮಾತುಗಳು ಹಾಗೂ ಮಗುವನ್ನು ಸುಡುವ ದೃಶ್ಯ ಸೇರಿದಂತೆ ಹಲವು ಅಂಶಗಳಲ್ಲಿ ಬದಲಾವಣೆ ಮಾಡುವಂತೆ ಸೂಚಿಸಲಾಗಿದೆ.
ಸಿಬಿಎಫ್‌ಸಿ ಸೂಚಿಸಿದ ಎಲ್ಲ ತಿದ್ದುಪಡಿಗಳನ್ನು ಪೂರ್ಣಗೊಳಿಸಿದ ಬಳಿಕ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.



