ನವದೆಹಲಿ: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಿಲುಕಿರುವ ಬಾಲಿವುಡ್ ನಟ ರಾಜ್ಪಾಲ್ ಯಾದವ್ಗೆ ದೆಹಲಿ ಹೈಕೋರ್ಟ್ ಭಾರೀ ಆಘಾತ ನೀಡಿದೆ. ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, 7 ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಕಾಯಂ ಮಾಡಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.
ಪ್ರಕರಣದಲ್ಲಿ ರಾಜ್ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಅವರಿಗೂ ಭಾರೀ ಆರ್ಥಿಕ ಹೊರೆ ಬಿದ್ದಿದೆ. ಪ್ರತಿ ಪ್ರಕರಣಕ್ಕೂ ತಲಾ 5.51 ಕೋಟಿ ರೂಪಾಯಿ ಪರಿಹಾರ ಪಾವತಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ಹಿಂದೆ ಪಾವತಿಸಿದ್ದ 2.25 ಕೋಟಿ ರೂಪಾಯಿಯನ್ನು ಬಾಕಿ ಮೊತ್ತದಲ್ಲಿ ಸರಿಹೊಂದಿಸಲಾಗುವುದು ಎಂದು ತಿಳಿಸಿದೆ.
ವಿಚಾರಣೆ ವೇಳೆ ಸಂಧಾನದ ಮೂಲಕ ಬಾಕಿ ಹಣ ಪಾವತಿಸುವುದಾಗಿ ರಾಜ್ಪಾಲ್ ಯಾದವ್ ಹಲವು ಬಾರಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ, ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಠಿಣ ನಿಲುವು ತಾಳಿತು. ಅಂತಿಮ ಹಂತದಲ್ಲಿ ದೂರುದಾರ ಸಂಸ್ಥೆ ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಇನ್ನು ಯಾವುದೇ ಹಣ ಪಾವತಿಸಲು ಸಾಧ್ಯವಿಲ್ಲ, ತಾವು ಜೈಲು ಶಿಕ್ಷೆ ಅನುಭವಿಸಲು ಸಿದ್ಧ ಎಂದು ಅವರು ತಿಳಿಸಿದ್ದಾಗಿ ದಾಖಲಾಗಿದೆ.
ಆದಾಗ್ಯೂ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಶಿಕ್ಷೆ ಜಾರಿಗೆ ತಡೆ ಮುಂದುವರಿಯಲಿದೆ.
ವಿಚಾರಣೆ ವೇಳೆ ನ್ಯಾಯಾಲಯ, “ಯಾವುದೇ ವ್ಯಕ್ತಿ ಸಿನಿಮಾ ಕ್ಷೇತ್ರದವರಾಗಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಸೌಲಭ್ಯ ನೀಡಲು ಸಾಧ್ಯವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.



