ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರ ವ್ಯಾಪ್ತಿಯ ಹದಗೆಟ್ಟ ರಸ್ತೆಗಳನ್ನು ಸುಧಾರಿಸಲು ಆದ್ಯತೆ ನೀಡುವಂತೆ ಆಗ್ರಹಿಸಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ ಅವರನ್ನು ಭೇಟಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ-ದೊಡ್ಡೂರು ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯ ಅಭಿವೃದ್ಧಿ ಹಾಗೂ ಮಾರ್ಗ ಮಧ್ಯೆ ಬರುವ ಸೇತುವೆಗಳ ನಿರ್ಮಾಣ ತುರ್ತು ಅಗತ್ಯವಾಗಿದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಈ ರಸ್ತೆಯ ಮೂಲಕ ನಿತ್ಯ ನೂರಾರು ವಾಹನಗಳು ಹಾಗೂ ರೈತಾಪಿ ಜನರು ಸಂಚರಿಸುತ್ತಿದ್ದು, ಸಾವಿರಾರು ಎಕರೆ ಕೃಷಿ ಜಮೀನುಗಳಿಗೆ ಇದೇ ಮುಖ್ಯ ಸಂಪರ್ಕ ಮಾರ್ಗವಾಗಿದೆ ಎಂದು ವಿವರಿಸಿದರು.
ರಸ್ತೆಯಲ್ಲಿರುವ ಸೇತುವೆ ಕೆಳಮಟ್ಟದಲ್ಲಿರುವುದರಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದು ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಹಿಂದೆ ಭಾರಿ ಮಳೆಯ ಸಂದರ್ಭದಲ್ಲಿ ಬಸ್ವೊಂದು ನೀರಿನಲ್ಲಿ ತೇಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಲಾಗಿತ್ತು ಎಂದು ನೆನಪಿಸಿದರು.
ಹೀಗಾಗಿ ರಸ್ತೆ ಅಭಿವೃದ್ಧಿಯ ಜೊತೆಗೆ ಹೊಸ ಸೇತುವೆ ನಿರ್ಮಾಣ ಕೂಡ ಅತ್ಯಗತ್ಯವಾಗಿದ್ದು, ಸರ್ಕಾರ ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಬೇಡಿಕೆಗಳಿದ್ದು, ಇಲಾಖೆಯ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಶಿರಹಟ್ಟಿ ಕ್ಷೇತ್ರದ ದೊಡ್ಡೂರು ರಸ್ತೆ ಅಭಿವೃದ್ಧಿ ಕುರಿತ ಮನವಿಯನ್ನು ಸಹ ಸಕಾರಾತ್ಮಕವಾಗಿ ಪರಿಗಣಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
“ರೈತರು ಮತ್ತು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಲಕ್ಷ್ಮೇಶ್ವರ-ದೊಡ್ಡೂರು ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು.”
ಡಾ. ಚಂದ್ರು ಲಮಾಣಿ, ಶಾಸಕ



