ವಿಜಯಸಾಕ್ಷಿ ಸುದ್ದಿ, ರೋಣ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ವಿತರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿರುವ ಕೃಷಿ ಇಲಾಖೆ, ಇನ್ನುಮುಂದೆ ಎಫ್‌ಐಡಿ ಕಡ್ಡಾಯಗೊಳಿಸಿದೆ. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಉಪನಿರ್ದೇಶಕ ಬಿ.ಆರ್. ಪಾಲಾಕ್ಷಗೌಡ ಎಚ್ಚರಿಕೆ ನೀಡಿದರು.
ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಸಗೊಬ್ಬರ ಕೊರತೆ ಉಂಟಾಗಿರುವ ಹಿನ್ನೆಲೆ ರೈತರು ಗೊಬ್ಬರವನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯವಾಗಿ ಈ ಬಾರಿ ರೈತರು ರಸಗೊಬ್ಬರ ಪಡೆಯಬೇಕಾದರೆ ಎಫ್‌ಐಡಿ ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಗೊಬ್ಬರ ವಿತರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರು ಬಿತ್ತನೆ ಮಾಡಿದ ಕ್ಷೇತ್ರದ ಆಧಾರದ ಮೇಲೆ ಕೆ-ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ರಸಗೊಬ್ಬರ ಮಾರಾಟಗಾರರು ತಮ್ಮ ಓ-ಫಾರಂಗಳ ಮೂಲಕ ನೋಂದಣಿ ಮಾಡಿಸಿಕೊಂಡು ಸರ್ಕಾರ ನಿಗದಿಪಡಿಸಿದ ದರದಲ್ಲೇ ಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ದಂಡ ವಿಧಿಸುವುದರ ಜೊತೆಗೆ ಅಂಗಡಿ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೊಬ್ಬರ ವಿತರಣೆಯ ವೇಳೆ ಗದ್ದಲ ಅಥವಾ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಸಹಾಯಕ ನಿರ್ದೇಶಕ ಎಸ್.ಎಫ್. ತಹಸೀಲ್ದಾರ್ ಮಾತನಾಡಿ, ರೈತರು ಅಗತ್ಯಕ್ಕೆ ತಕ್ಕಷ್ಟು ಮಾತ್ರ ರಸಗೊಬ್ಬರ ಖರೀದಿಸಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರೋಣ ಹಾಗೂ ಗಜೇಂದ್ರಗಡ ತಾಲೂಕಿನ ರೈತರು ಈ ಬಾರಿ ಗೊಬ್ಬರ ಬಳಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕು. ಗೊಬ್ಬರದ ದಾಸ್ತಾನು ಹಾಗೂ ಬೆಲೆಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಅಂಗಡಿಗಳಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.
ರೈತರು ಗೊಬ್ಬರ ಖರೀದಿಸುವ ಮೊದಲು ಬೆಲೆ ಖಚಿತಪಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯ ಜೊತೆಗೆ ನ್ಯಾನೋ ಯೂರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ಬಳಕೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದರು.
ಸಭೆಯಲ್ಲಿ ತಾಂತ್ರಿಕ ಅಧಿಕಾರಿ ಗೋಣಿಬಸಪ್ಪ, ಎ.ಎ. ಶಾಬಾದಿ, ಕೃಷಿ ಅಧಿಕಾರಿ ಕೃಷ್ಣಾ ಶಿರೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಗೆ ಕೆ-ಕಿಸಾನ್ ತಂತ್ರಜ್ಞಾನದ ಮೂಲಕ ಯೂರಿಯಾ ಗೊಬ್ಬರ ವಿತರಣೆ ಕುರಿತು ಆನ್‌ಲೈನ್ ತರಬೇತಿ ನೀಡಲಾಯಿತು.
“ರಸಗೊಬ್ಬರ ಕೊರತೆಯ ಆತಂಕ ಇರುವುದರಿಂದ ರೈತರು ಮಿತ ಬಳಕೆಯತ್ತ ಗಮನ ಹರಿಸಬೇಕು.”ಎಸ್.ಎಫ್. ತಹಸೀಲ್ದಾರ್, ಸಹಾಯಕ ನಿರ್ದೇಶಕರು



