ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ನಡೆದ ಭೀಕರ ದುರಂತ ಒಂದು ಕುಟುಂಬದ ಬದುಕನ್ನೇ ಕತ್ತಲಲ್ಲಿ ತಳ್ಳಿದೆ. ಮನರಂಜನೆಗಾಗಿ ಜಿಪ್‌ಲೈನ್ ಸಾಹಸಕ್ಕೆ ತೆರಳಿದ್ದ 15 ವರ್ಷದ ಬಾಲಕ, ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳದಲ್ಲಿದ್ದ ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಬಾಲಕ ತನ್ನ ಪೋಷಕರೊಂದಿಗೆ ಚೌಪಟ್ಟಿಗೆ ಬಂದಿದ್ದು, ಉತ್ಸಾಹದಿಂದ ಜಿಪ್‌ಲೈನಿಂಗ್ ಆರಂಭಿಸಿದ್ದ. ಆದರೆ ಮಧ್ಯದಲ್ಲೇ ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದ ಪರಿಣಾಮ ಆತ ನೇರವಾಗಿ ಕೆಳಗೆ ಬಿದ್ದಿದ್ದಾನೆ.
ದುರಂತದ ಕ್ಷಣವನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗನನ್ನು ಕಣ್ಣೆದುರೇ ಕಳೆದುಕೊಂಡ ಪೋಷಕರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲುಕುವಂತಿತ್ತು.
ಈ ಘಟನೆ ಬಳಿಕ ಜಿಪ್‌ಲೈನ್ ನಿರ್ವಹಣಾ ಕಂಪನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ.



