‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಟೀಸರ್‌ನ ಬೋಲ್ಡ್ ದೃಶ್ಯಗಳನ್ನು ಕೆಲವರು ಟೀಕಿಸಿದ್ದರೆ, ಇನ್ನೂ ಕೆಲವರು ಯಶ್ ಅವರ ಹೊಸ ಪ್ರಯೋಗಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ಈ ವಿವಾದದ ಬಗ್ಗೆ ನಟಿ ಪುಷ್ಪಾ ನೇರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟೀಸರ್ ಅಂದ್ರೆ ಕೇವಲ ಆಕರ್ಷಣೆಗೆ ಮಾಡಿರುವ ಒಂದು ಚಿಕ್ಕ ಭಾಗ. ಅದನ್ನೇ ಆಧಾರ ಮಾಡಿಕೊಂಡು ಇಡೀ ಸಿನಿಮಾವನ್ನು ನಿರ್ಧರಿಸುವುದು ತಪ್ಪು. ಸಿನಿಮಾ ನೋಡಿದ ನಂತರ ಮಾತ್ರ ಅದರ ಕಥೆ, ಉದ್ದೇಶ ಅರ್ಥವಾಗುತ್ತದೆ” ಎಂದು ಹೇಳಿದರು.
ಕನ್ನಡ ಪ್ರೇಕ್ಷಕರಿಗೆ ಈ ರೀತಿಯ ಕಂಟೆಂಟ್ ಸರಿಯಲ್ಲ ಎಂಬ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ನೋಡಲು ಬಯಸುತ್ತಾರೋ ಅದನ್ನೇ ಸಿನಿಮಾ ಮಂದಿ ಕೊಡುತ್ತಾರೆ. ಇಂದಿನ ಯೂತ್ ಬದಲಾಗಿದ್ದಾರೆ. ಅವರ ರುಚಿಗೂ ಸಿನಿಮಾಗಳು ಬದಲಾಗುತ್ತಿವೆ” ಎಂದು ಹೇಳಿದರು.
ಇನ್ನೊಂದೆಡೆ, ಯಶ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳು ವರ್ಷಗಟ್ಟಲೆ ತಡವಾಗುತ್ತಿರುವ ವಿಚಾರಕ್ಕೂ ಅವರು ಪ್ರತಿಕ್ರಿಯಿಸಿದರು. “ಕನ್ನಡ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ. ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡಲು ಸಮಯ ಬೇಕು. ಅದು ನಮ್ಮ ಇಂಡಸ್ಟ್ರಿಯ ಸಾಧನೆ” ಎಂದು ಅಭಿಪ್ರಾಯಪಟ್ಟರು.
ಯಶ್ ಅಭಿನಯದ ‘ಟಾಕ್ಸಿಕ್’ ಈಗಾಗಲೇ ದೇಶಾದ್ಯಂತ ಕುತೂಹಲ ಮೂಡಿಸಿದ್ದು, ಸಿನಿಮಾ ಬಿಡುಗಡೆಯ ಮುನ್ನವೇ ಭಾರೀ ಹೈಪ್ ಪಡೆದುಕೊಂಡಿದೆ.



