ಬೆಂಗಳೂರು: ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗಂದಾಧರ ,ಬಸವ ,ಕಿರಣ್ ಬಂಧಿತ ಆರೋಪಿಗಳಾಗಿದ್ದು, ಬ್ಯಾಡರಹಳ್ಳಿ ಸಿಂಡಿಕೇಟ್ ಲೇಔಟ್ ನಲ್ಲಿ ಮಾರ್ಚ್ 26 ರಂದು ಕಳ್ಳತನ ನಡೆದಿತ್ತು. ಮನೆಯವರು ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಮನೆ ಖಾಲಿ ಇರುವುದನ್ನು ಗಮನಿಸಿದ್ದ ಖದೀಮರು, ಕಳ್ಳತನಕ್ಕೆ ಸಂಚು ರೂಪಿಸಿದ್ದರು.
ಮನೆ ಮುಂದೆ ಬಿದ್ದಿದ್ದ ನ್ಯೂಸ್ ಪೇಪರ್ ಹಾಗೂ ಮನೆಗೆ ಹಾಕಿದ್ದ ಬೀಗವನ್ನು ಗಮನಿಸಿ, ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳ್ಳರು ಮನೆಯೊಳಗೆ ನುಗ್ಗಿ ಲಾಕರ್ ಒಡೆಯಲು ಪ್ರಯತ್ನಿಸಿದ್ದರು. ಆದರೆ ಲಾಕರ್ ತೆರೆಯದ ಹಿನ್ನೆಲೆ ಅದನ್ನು ಹೊರಗೆ ತೆಗೆದುಕೊಂಡು ಹೋಗಿ ಹೊಡೆದು ಒಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು 500 ಗ್ರಾಂ ಚಿನ್ನಾಭರಣ, 70 ಲಕ್ಷ ರೂಪಾಯಿ ಮೌಲ್ಯದ ಬಂಗಾರ, 1 ಲಕ್ಷ 43 ಸಾವಿರ ರೂಪಾಯಿ ನಗದು ಹಾಗೂ 750 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



