ಕಾರು ನಜ್ಜುಗುಜ್ಜು-ಶವ ಹೊರತೆಗೆಯಲು ಹರಸಾಹಸ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ವಾರ್ಡರ್ ಸಂಗಪ್ಪ ತಂದೆ ರಂಗಪ್ಪ ಮಜ್ಜಗಿ (41) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಧಾರವಾಡದಿಂದ ಬಾಗಲಕೋಟೆ ಜಿಲ್ಲೆಯ ನೀರಲಗಿ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಗಪ್ಪ ಕಾರಿನೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸರು ಅವರನ್ನು ಹೊರತೆಗೆಯಲು ಹರಸಾಹಸಪಟ್ಟರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದು ದೃಢಪಟ್ಟಿತು.
ಮೃತ ಸಂಗಪ್ಪ ಮಜ್ಜಗಿ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ನರಗುಂದ ಸಿಪಿಐ ಸತ್ಯಪ್ಪ ಮಾಳಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



