HomeGadag Newsಬಡವರ ಅನ್ನಕ್ಕೂ ಸರ್ವರ್ ಕಂಟಕ!

ಬಡವರ ಅನ್ನಕ್ಕೂ ಸರ್ವರ್ ಕಂಟಕ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬಯೋಮೆಟ್ರಿಕ್ ಸರ್ವರ್ ಕೈಕೊಟ್ಟ ಪರಿಣಾಮ, ಪಡಿತರ ಪಡೆಯಲು ಫಲಾನುಭವಿಗಳು ಕಳೆದ ಹಲವು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆಬ್ಬೆಟ್ಟು ಹಾಕಲು ಸಾಧ್ಯವಾಗದೆ ನೂರಾರು ಮಂದಿ ದಿನಪೂರ್ತಿ ಸಾಲಿನಲ್ಲಿ ನಿಂತರೂ ಖಾಲಿಕೈಯಿಂದ ಮನೆಗೆ ಹಿಂತಿರುಗುತ್ತಿರುವ ದೃಶ್ಯ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆಡಳಿತದ ವಿರುದ್ಧ ಘೋಷಣೆ ಕೂಗಿದರು.
“ಬೇಕೇ ಬೇಕು ನ್ಯಾಯ ಬೇಕು”, “ಸರ್ವರ್ ಸಮಸ್ಯೆ ನಿವಾರಿಸಿ” ಎಂದು ಕೂಗಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಮೂಲಭೂತ ಸೇವೆ ಒದಗಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಳೆಗಾಲದ ಕೃಷಿ ಚಟುವಟಿಕೆ ಆರಂಭವಾಗಿರುವ ವೇಳೆಯಲ್ಲೇ ರೈತರು ಹೊಲದ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
“ಬೆಳಗ್ಗೆಯಿಂದ ಸಂಜೆವರೆಗೆ ಕಾಯಿಸುತ್ತಾರೆ. ಕೊನೆಗೆ ‘ಸರ್ವರ್ ಇಲ್ಲ’ ಎಂದು ಮನೆಗೆ ಕಳುಹಿಸುತ್ತಾರೆ. ಎರಡು-ಮೂರು ದಿನಗಳಿಂದ ಬರುತ್ತಿದ್ದರೂ ಪಡಿತರ ಸಿಗುತ್ತಿಲ್ಲ,” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ಒಂದೆಡೆ ಕೃಷಿ ಕೆಲಸ, ಮತ್ತೊಂದೆಡೆ ಪಡಿತರದ ಕಷ್ಟ. ಕೆಲಸವೂ ಆಗುತ್ತಿಲ್ಲ, ಪಡೀತರವೂ ಸಿಗುತ್ತಿಲ್ಲ,” ಎಂದು ಅಸಮಾಧಾನ ಹೊರಹಾಕಿದರು.
ಮಹಿಳೆಯರು ಮಾತನಾಡಿ, “ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಬಿಟ್ಟು ಬರುತ್ತಿದ್ದೇವೆ. ದಿನವಿಡೀ ಕಾಯಿಸಿದರೂ ಪಡಿತರ ಸಿಗುತ್ತಿಲ್ಲ. ಬಡವರ ಸಂಕಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ವೃದ್ಧರು, “ಬೆರಳಚ್ಚೇ ಸರಿಯಾಗಿ ಬರುತ್ತಿಲ್ಲ. ಅದರ ಮೇಲೆ ಸರ್ವರ್ ಸಮಸ್ಯೆ. ಪ್ರತಿದಿನ ಬಂದು ಹಿಂತಿರುಗುವುದು ತುಂಬಾ ಕಷ್ಟ,” ಎಂದು ಅಳಲು ತೋಡಿಕೊಂಡರು.
ಅಂಗವಿಕಲರು ಮತ್ತು ವೃದ್ಧ ಮಹಿಳೆಯರು ನೆಲದ ಮೇಲೆಯೇ ಕುಳಿತು ಕಾಯುತ್ತಿರುವ ದೃಶ್ಯ ಜನರ ಮನಕಲುಕಿತು.
“ಸರ್ವರ್ ಸಮಸ್ಯೆ ಇದೆ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಸ್ಪಂದನೆ ಇಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಕೇಳುವವರೇ ಇಲ್ಲ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಆಫ್‌ಲೈನ್ ಮೂಲಕವಾದರೂ ಪಡಿತರ ವಿತರಣೆ ಮಾಡಬೇಕು. ಇಲ್ಲವಾದರೆ ತಾಲೂಕು ಮಟ್ಟದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜನರ ಪ್ರಮುಖ ಆಗ್ರಹಗಳು

  •  ಸರ್ವರ್ ಸಮಸ್ಯೆ ತಕ್ಷಣ ಬಗೆಹರಿಸಬೇಕು
  •  ಆಫ್‌ಲೈನ್ ಮೂಲಕ ಪಡಿತರ ವಿತರಣೆ ಆರಂಭಿಸಬೇಕು
  •  ಹಿರಿಯ ನಾಗರಿಕರು, ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು
  •  ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!