ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮಕ್ಕಳ ವ್ಯಕ್ತಿತ್ವ ವಿಕಸನ ಸಾಕಾರಗೊಳ್ಳಬೇಕಾದರೆ ಪಾಲಕರು ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಗದಗ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಂಜುನಾಥ ಅಕ್ಕಸಾಲಿ ಹೇಳಿದರು.
ಬೆಟಗೇರಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಾಸಿಕ ಚಿಂತನಗೋಷ್ಠಿ, ಮೌನೇಶ್ವರ ವಚನ ಪಠಣ, ಭಕ್ತರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದು, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ವೇದಿಕೆ ಒದಗಿಸಬೇಕು. ಇಷ್ಟವಿಲ್ಲದ ವಿಷಯಗಳನ್ನು ಓದಲು ಒತ್ತಾಯಿಸಬಾರದು. ಪ್ರತಿಯೊಬ್ಬ ಮಗುವಿನ ಪ್ರತಿಭೆ ವಿಭಿನ್ನವಾಗಿದ್ದು, ಎಲ್ಲರನ್ನೂ ಒಂದೇ ಮಾನದಂಡದಿಂದ ಅಳೆಯುವುದು ತಪ್ಪು ಎಂದು ಹೇಳಿದರು.
ಮಕ್ಕಳು ಸನ್ಮಾರ್ಗದಲ್ಲಿ ನಡೆದು ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕಾದರೆ ಪಾಲಕರ ಆಚಾರ-ವಿಚಾರ, ನಡೆ-ನುಡಿ ಹಾಗೂ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೊಯಲಾ ಇಂಗ್ಲಿಷ್ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ತನ್ವಿ ಪ್ರಸನ್ನ ಅರ್ಕಸಾಲಿ ಮೌನೇಶ್ವರ ವಚನ ಪಠಣದ ಮೂಲಕ ಗಮನ ಸೆಳೆದಳು. ಬಾಲವಿನಾಯಕ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷಾ ವಿಶ್ವನಾಥ ಕಮ್ಮಾರ ನೃತ್ಯ ಪ್ರದರ್ಶನ ನೀಡಿ ಭಕ್ತರನ್ನು ರಂಜಿಸಿದಳು.
ದೇವಸ್ಥಾನದ ಸಾಂಸ್ಕೃತಿಕ ವಿಭಾಗದ ಸಂಚಾಲಕ ವಿಶ್ವನಾಥ ಯ. ಕಮ್ಮಾರ, ವಿಜಯಕುಮಾರ ಬೆಂತೂರ, ಮಹೇಶ ಬಡಿಗೇರ ಸೇರಿದಂತೆ ಭಕ್ತರು ಕಾಳಿಕಾಸ್ತುತಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ ಮಾತನಾಡಿ, ಪ್ರತಿ ತಿಂಗಳು ನಡೆಯುವ ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಿ ಮೆರಗು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ಕುಟುಂಬಗಳನ್ನು ಗೌರವಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಮಹಿಳಾ ಮಂಡಳದ ಪದಾಧಿಕಾರಿಗಳು, ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



