ಮುಸ್ಲಿಮರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅಥವಾ ಈದುಲ್ ಅಝ್ಹಾವನ್ನು ವಿಶ್ವದಾದ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಸ್ಲಾಮೀ ಕ್ಯಾಲೆಂಡರಿನ ದುಲ್‌ಹಜ್ ತಿಂಗಳ 10ರಂದು ಆಚರಿಸಲಾಗುವ ಈ ಹಬ್ಬವು ತ್ಯಾಗ, ಸಮರ್ಪಣೆ, ದೇವಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿದೆ.
ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕಿನ ಘಟನೆಗಳನ್ನು ಬಕ್ರೀದ್ ಹಬ್ಬ ನೆನಪಿಸುತ್ತದೆ. ಯಹೂದಿಗಳು, ಕ್ರೈಸ್ತರು ಹಾಗೂ ಮುಸ್ಲಿಮರು ಸಮಾನವಾಗಿ ಗೌರವಿಸುವ ಮಹಾನ್ ವ್ಯಕ್ತಿತ್ವವಾಗಿರುವ ಇಬ್ರಾಹೀಮ್ (ಅಬ್ರಾಹಂ) ಅವರು ಏಕದೇವತ್ವದ ಸಂದೇಶ ಸಾರಿದ ಪ್ರವಾದಿಯಾಗಿದ್ದರು. ಇರಾಕ್‌ನ ಉರ್ ನಗರದಲ್ಲಿ ಜನಿಸಿದ ಅವರು, ದುಷ್ಟ ರಾಜ ನಮ್ರೂದ್‌ನ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಸಮಾಜ ಸುಧಾರಣೆಯ ಹಾದಿ ಹಿಡಿದರು. ಅನೇಕ ಸಂಕಷ್ಟ, ಹಿಂಸೆ, ದೇಶಭ್ರಷ್ಟ ಪರಿಸ್ಥಿತಿಗಳ ನಡುವೆಯೂ ದೇವರ ಮಾರ್ಗದಿಂದ ಹಿಂದೆ ಸರಿಯಲಿಲ್ಲ.
ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕು ಅನೇಕ ಸತ್ವಪರೀಕ್ಷೆಗಳಿಂದ ಕೂಡಿತ್ತು. ವೃದ್ಧಾಪ್ಯದಲ್ಲಿ ಪತ್ನಿ ಹಾಜಿರಾ ಮತ್ತು ಪುಟ್ಟ ಮಗ ಇಸ್ಮಾಯಿಲ್ ಅವರನ್ನು ಅರೇಬಿಯಾದ ನಿರ್ಜನ ಮರುಭೂಮಿಯಲ್ಲಿ ಬಿಟ್ಟುಬರಬೇಕಾದ ಸಂದರ್ಭ ಎದುರಾದರೂ ದೇವಾಜ್ಞೆಗೆ ಶರಣಾದರು. ದಾಹದಿಂದ ಅಳುತ್ತಿದ್ದ ಮಗುವಿಗಾಗಿ ತಾಯಿ ಹಾಜಿರಾ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ನೀರಿಗಾಗಿ ಓಡಾಡಿದ ಘಟನೆ ಇಂದಿಗೂ ಹಜ್ ಯಾತ್ರೆಯ ಪ್ರಮುಖ ಆಚರಣೆಯಾಗಿದೆ. ಇದೇ ವೇಳೆ ಇಸ್ಮಾಯಿಲ್ ಅವರ ಕಾಲಿನ ಬಳಿಯಲ್ಲಿ ಉಕ್ಕಿಬಂದ ನೀರಿನ ಚಿಲುಮೆಯೇ ಪವಿತ್ರ ಝಮ್ ಝಮ್ ಎಂದು ಪ್ರಸಿದ್ಧಿಯಾಯಿತು.
ಇಬ್ರಾಹೀಮ್ (ಅ) ಅವರ ಪುತ್ರ ಪ್ರೀತಿ ಹಾಗೂ ದೇವಭಕ್ತಿಯನ್ನು ಪರೀಕ್ಷಿಸಲು ಅಲ್ಲಾಹನು ಪುತ್ರ ಇಸ್ಮಾಯಿಲ್ ಅವರನ್ನು ಬಲಿಕೊಡಬೇಕೆಂದು ಆದೇಶಿಸಿದನೆಂದು ಇಸ್ಲಾಮಿನ ಇತಿಹಾಸ ಹೇಳುತ್ತದೆ. ದೇವರ ಆಜ್ಞೆಗೆ ತಲೆಬಾಗಿದ ಇಬ್ರಾಹೀಮ್ (ಅ) ಪುತ್ರನನ್ನು ಬಲಿಕೊಡಲು ಮುಂದಾದಾಗ, ಅಲ್ಲಾಹನು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸಿದನು. ಈ ಘಟನೆಯ ಸ್ಮರಣಾರ್ಥವೇ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ.
ಹಬ್ಬದ ದಿನ ಮುಸ್ಲಿಮರು ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್ ಮತ್ತು ಖುತ್ಬಾಗಳಲ್ಲಿ ಭಾಗವಹಿಸುತ್ತಾರೆ. ಹೊಸ ಉಡುಗೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಂಧು-ಮಿತ್ರರ ಮನೆಗಳಿಗೆ ಭೇಟಿ ನೀಡುತ್ತಾರೆ. ಬಲಿ ಅರ್ಪಿಸಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ಹಂಚಿ, ಒಂದು ಭಾಗವನ್ನು ಬಡವರಿಗೆ ನೀಡುವ ಮೂಲಕ ಸಹೋದರತ್ವ ಮತ್ತು ಹಂಚಿಕೆ ಸಂಸ್ಕೃತಿಯನ್ನು ಈ ಹಬ್ಬ ಸಾರುತ್ತದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ; ಅದು ತ್ಯಾಗ, ದಾನಧರ್ಮ, ಸಹಾನುಭೂತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರುವ ಹಬ್ಬವಾಗಿದೆ.
— ಡಾ. ತಯಬಅಲಿ ಅ. ಹೊಂಬಳ, ಗದಗ



