“ವಿದ್ಯೆಯೇ ಬದುಕಿನ ಬೆಳಕು” ಎಂಬ ಮಾತು ಪ್ರತಿಯೊಬ್ಬರ ಜೀವನದಲ್ಲಿಯೂ ಸತ್ಯವಾಗಿದೆ. ಶಿಕ್ಷಣವು ಮಕ್ಕಳ ಬದುಕಿಗೆ ದಾರಿ ತೋರಿಸುವ ಮಹಾಶಕ್ತಿ. ಅದು ಕೇವಲ ಓದು-ಬರಹ ಕಲಿಸುವುದಲ್ಲ; ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವದಿಂದ ಬದುಕಲು ಸಹಾಯ ಮಾಡುತ್ತದೆ. ಈ ಶಿಕ್ಷಣದ ಮೊದಲ ಹೆಜ್ಜೆ ಶಾಲೆಯಲ್ಲಿಯೇ ಆರಂಭವಾಗುತ್ತದೆ. ಆದ್ದರಿಂದ ಶಾಲೆ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಮಕ್ಕಳ ಕನಸುಗಳು ಅರಳುವ ತೋಟ, ಜ್ಞಾನ ಬೆಳಗುವ ನಂದಾದೀಪ ಹಾಗೂ ಉತ್ತಮ ಭವಿಷ್ಯವನ್ನು ನಿರ್ಮಿಸುವ ಪವಿತ್ರ ಸ್ಥಳವಾಗಿದೆ.
ಎರಡು ತಿಂಗಳ ಬೇಸಿಗೆ ರಜೆಯನ್ನು ಸಂತೋಷದಿಂದ ಕಳೆಯುವ ಮಕ್ಕಳು ಹೊಸ ಉತ್ಸಾಹ, ಹೊಸ ನಿರೀಕ್ಷೆ ಮತ್ತು ಹೊಸ ಕನಸುಗಳೊಂದಿಗೆ ಮತ್ತೆ ಶಾಲೆಯತ್ತ ಹೆಜ್ಜೆ ಇಡುವ ದಿನವೇ “ಶಾಲಾ ಪ್ರಾರಂಭೋತ್ಸವ”. ಈ ದಿನ ಮಕ್ಕಳ ಪಾಲಿಗೆ ಹಬ್ಬದ ಸಂಭ್ರಮವನ್ನು ಉಂಟುಮಾಡುತ್ತದೆ. ಸ್ನೇಹಿತರನ್ನು ಮತ್ತೆ ಭೇಟಿಯಾಗುವ ಸಂತೋಷ, ಹೊಸ ಪಠ್ಯಪುಸ್ತಕಗಳ ಪರಿಮಳ, ಹೊಸ ತರಗತಿ, ಹೊಸ ಶಿಕ್ಷಕರು ಮತ್ತು ಹೊಸ ಪಾಠಗಳು ಮಕ್ಕಳ ಮನದಲ್ಲಿ ವಿಶೇಷ ಉಲ್ಲಾಸ ಮೂಡಿಸುತ್ತವೆ. ಶಾಲಾ ಪ್ರಾರಂಭೋತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಹೊಸ ಶೈಕ್ಷಣಿಕ ವರ್ಷದ ಭರವಸೆಯ ಆರಂಭವಾಗಿದೆ.
ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಾಲೆ ಅವರಿಗೆ ಉತ್ತಮ ಸಂಸ್ಕಾರ ಮತ್ತು ಬದುಕಿನ ದಾರಿಯನ್ನು ತೋರಿಸುತ್ತದೆ. ಮನೆಯ ನಂತರ ಮಕ್ಕಳು ಹೆಚ್ಚು ಸಮಯ ಕಳೆಯುವ ಸ್ಥಳವೇ ಶಾಲೆ. ಅಲ್ಲಿ ಮಕ್ಕಳು ಕೇವಲ ಓದು-ಬರಹವಲ್ಲದೆ, ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನೂ ಕಲಿಯುತ್ತಾರೆ.
ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಜ್ಞಾನದ ಜೊತೆಗೆ ಶಿಸ್ತು, ಸಂಸ್ಕಾರ, ಗೌರವ, ಸಹನೆ ಮತ್ತು ಸಹಕಾರದಂತಹ ಮೌಲ್ಯಗಳು ಬೆಳೆದು ಬರುತ್ತವೆ. ಸ್ನೇಹದ ಮಹತ್ವ ತಿಳಿಯುತ್ತದೆ. ಹಿರಿಯರನ್ನು ಗೌರವಿಸುವ ಮನೋಭಾವ ಮೂಡುತ್ತದೆ. ಒಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಶಾಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ಕಲಿತ ಒಳ್ಳೆಯ ಗುಣಗಳು ಜೀವನಪೂರ್ತಿ ಜೊತೆಯಾಗಿರುತ್ತವೆ.
ಶಾಲಾ ಪ್ರಾರಂಭೋತ್ಸವದ ದಿನ ಶಾಲಾ ಆವರಣವು ಬಣ್ಣಬಣ್ಣದ ತೋರಣಗಳು, ಹೂವಿನ ಅಲಂಕಾರ, ಸ್ವಾಗತ ಫಲಕಗಳು ಮತ್ತು ಮಕ್ಕಳ ನಗುಮುಖಗಳಿಂದ ಕಂಗೊಳಿಸುತ್ತಿರುತ್ತದೆ. ಪೋಷಣ್ ಅಭಿಯಾನದಡಿ ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ಬಾಳೆಹಣ್ಣುಗಳ ವಿತರಣೆ ಮಕ್ಕಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಪುಟ್ಟ ಮಕ್ಕಳು ಹೊಸ ಉಡುಪು ಧರಿಸಿ, ಹೊಸ ಬ್ಯಾಗ್ ಹೊತ್ತು ಶಾಲೆಗೆ ಬರುತ್ತಾರೆ. ಕೆಲವರು ಸಂತೋಷದಿಂದ ಓಡಾಡುತ್ತಿದ್ದರೆ, ಇನ್ನು ಕೆಲವರು ಹೊಸ ಶಾಲೆ ಎಂಬ ಭಯದಿಂದ ತಾಯಿಯ ಕೈ ಹಿಡಿದು ನಿಂತು ಅಳುತ್ತಾರೆ. ಅಂತಹ ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡಾಗ ಅವರ ಭಯ ದೂರವಾಗಿ ಆತ್ಮವಿಶ್ವಾಸ ಮೂಡುತ್ತದೆ.
ಪ್ರಾರ್ಥನೆ, ನಾಡಗೀತೆ, ಸ್ವಾಗತ ಭಾಷಣ, ಅತಿಥಿಗಳ ಸಂದೇಶ, ಪಠ್ಯಪುಸ್ತಕ ವಿತರಣೆ, ಸಿಹಿ ವಿತರಣೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಹಾಗೂ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುತ್ತವೆ.
ಕಲಿಕೆ ಎನ್ನುವುದು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸಲು ಮಾತ್ರವಲ್ಲ; ಅದು ಬದುಕನ್ನು ಸುಂದರಗೊಳಿಸುವ ಶಕ್ತಿ. ಶಿಕ್ಷಣವಿಲ್ಲದ ಜೀವನ ಕತ್ತಲೆಯಂತಿದ್ದರೆ, ಶಿಕ್ಷಣವು ದಾರಿದೀಪದಂತಿದೆ.
ಕಲಿಕೆಯ ಮೂಲಕ ಜ್ಞಾನ ಹೆಚ್ಚುತ್ತದೆ, ಯೋಚನಾ ಶಕ್ತಿ ಬೆಳೆಯುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬರುತ್ತದೆ. ರೈತನಿಗೆ ಕೃಷಿ ಜ್ಞಾನ, ವೈದ್ಯನಿಗೆ ವೈದ್ಯಕೀಯ ಜ್ಞಾನ, ಶಿಕ್ಷಕನಿಗೆ ಬೋಧನಾ ಜ್ಞಾನ ಅಗತ್ಯವಿರುವಂತೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ.
ಶಾಲೆಯಲ್ಲಿ ಪುಸ್ತಕದ ಪಾಠ ಮಾತ್ರ ಕಲಿಯುವುದು ಸಾಕಾಗುವುದಿಲ್ಲ. ಶಿಸ್ತು, ಗೌರವ, ಸ್ವಚ್ಛತೆ, ಸಹಕಾರ ಮತ್ತು ಪರಿಸರ ಕಾಳಜಿ ಮುಂತಾದ ಮೌಲ್ಯಗಳನ್ನು ಮಕ್ಕಳು ಕಲಿಯಬೇಕು.
ಹಿರಿಯರನ್ನು ಗೌರವಿಸುವುದು, ತಂದೆ-ತಾಯಿ ಹಾಗೂ ಗುರುಗಳಿಗೆ ನಮಸ್ಕರಿಸುವುದು, ಸ್ನೇಹಿತರೊಂದಿಗೆ ಪ್ರೀತಿಯಿಂದ ವರ್ತಿಸುವುದು ಉತ್ತಮ ಸಂಸ್ಕಾರದ ಲಕ್ಷಣಗಳು. ದೇಶಪ್ರೇಮ ಮತ್ತು ಮಾನವೀಯತೆ ಕೂಡ ಮಕ್ಕಳಲ್ಲಿ ಬೆಳೆಯಬೇಕು. ಬಡವರಿಗೆ ಸಹಾಯ ಮಾಡುವುದು, ಸತ್ಯವಾಗಿ ಬದುಕುವುದು ಮತ್ತು ಪ್ರಾಣಿಗಳ ಮೇಲೆ ದಯೆ ತೋರಿಸುವುದು ಜೀವನದ ಮಹತ್ವದ ಮೌಲ್ಯಗಳಾಗಿವೆ.
ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಚಟುವಟಿಕೆಗಳು ಮಕ್ಕಳಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ.
“ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂದು ನಮ್ಮ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ತಾಯಿ ಮಕ್ಕಳಿಗೆ ಜೀವ ನೀಡಿದರೆ, ಗುರುಗಳು ಬದುಕಿನ ದಾರಿಯನ್ನು ತೋರಿಸುತ್ತಾರೆ.
ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುತ್ತಾರೆ, ತಪ್ಪುಗಳನ್ನು ತಿದ್ದುತ್ತಾರೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರುಗಳನ್ನು ಗೌರವದಿಂದ ಕಾಣಬೇಕು. ವಿನಯ ಮತ್ತು ಗೌರವ ವಿದ್ಯಾರ್ಥಿಯ ನಿಜವಾದ ಆಭರಣಗಳಾಗಬೇಕು.
ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸ್ನೇಹಿತರು ಸಿಗುತ್ತಾರೆ. ಒಳ್ಳೆಯ ಸ್ನೇಹಿತನು ಬದುಕಿನಲ್ಲಿ ಪ್ರೇರಣೆ ನೀಡುತ್ತಾನೆ. ಸ್ನೇಹಿತರೊಂದಿಗೆ ಪ್ರೀತಿಯಿಂದ ಇರಬೇಕು, ಜಗಳ, ಹಗೆ ಮತ್ತು ದ್ವೇಷದಿಂದ ದೂರ ಇರಬೇಕು ಎಂಬ ಪಾಠವೂ ಶಾಲೆಯಲ್ಲಿಯೇ ಸಿಗುತ್ತದೆ.
ಪುಸ್ತಕಗಳು ಜ್ಞಾನದ ಭಂಡಾರ. ಕಥೆಗಳು, ಜೀವನಚರಿತ್ರೆಗಳು ಮತ್ತು ವಿಜ್ಞಾನ ಪುಸ್ತಕಗಳು ಮಕ್ಕಳ ಯೋಚನೆಗೆ ಹೊಸ ದಿಕ್ಕು ನೀಡುತ್ತವೆ. ಮೊಬೈಲ್ ಮತ್ತು ಟಿವಿಯಲ್ಲಿ ಸಮಯ ಕಳೆಯುವುದಕ್ಕಿಂತ ಪುಸ್ತಕ ಓದುವುದು ಅತ್ಯುತ್ತಮ ಹವ್ಯಾಸವಾಗಿದೆ.
ಶಾಲೆಯಲ್ಲಿ ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಕ್ರೀಡೆ ಆರೋಗ್ಯ ಕಾಪಾಡುವುದರ ಜೊತೆಗೆ ತಂಡಭಾವನೆ ಬೆಳೆಸುತ್ತದೆ. ಹಾಡು, ನೃತ್ಯ, ಭಾಷಣ, ಕವನ ಮತ್ತು ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಹೊರತರುತ್ತವೆ.
ಮಕ್ಕಳ ಶಿಕ್ಷಣದಲ್ಲಿ ತಂದೆ-ತಾಯಿಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ಮಕ್ಕಳು ಶಾಲೆಗೆ ನಿಯಮಿತವಾಗಿ ಹೋಗುವಂತೆ ನೋಡಿಕೊಳ್ಳಬೇಕು ಮತ್ತು ಓದಿಗೆ ಪ್ರೋತ್ಸಾಹ ನೀಡಬೇಕು.
ಮಕ್ಕಳ ಮುಂದೆ ಕೆಟ್ಟ ಮಾತು, ಜಗಳ ಅಥವಾ ಸುಳ್ಳು ಹೇಳಬಾರದು. ಏಕೆಂದರೆ ಮಕ್ಕಳು ದೊಡ್ಡವರನ್ನು ನೋಡಿ ಅನುಕರಿಸುತ್ತಾರೆ.
ಒಳ್ಳೆಯ ವಿದ್ಯಾರ್ಥಿಯು ಸಮಯಪಾಲನೆ ಮಾಡುತ್ತಾನೆ, ಸತ್ಯ ಹೇಳುತ್ತಾನೆ, ಗುರುಗಳನ್ನು ಗೌರವಿಸುತ್ತಾನೆ, ಪರಿಶ್ರಮದಿಂದ ಓದುತ್ತಾನೆ ಮತ್ತು ಸಹಾಯ ಮಾಡುವ ಮನಸ್ಸು ಹೊಂದಿರುತ್ತಾನೆ.
ವಿದ್ಯಾರ್ಥಿ ಎಂದರೆ ಕೇವಲ ಹೆಚ್ಚು ಅಂಕ ಗಳಿಸುವವನಲ್ಲ, ಉತ್ತಮ ನಡತೆ ಮತ್ತು ಶಿಕ್ಷಕರಿಗೆ ಗೌರವ ಕೊಡುವವನೇ ನಿಜವಾದ ವಿದ್ಯಾರ್ಥಿ.
ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹಸಿರು. ನಮ್ಮ ನಾಡಿನ ಶಾಲಾ-ಕಾಲೇಜುಗಳಲ್ಲಿ ಕನ್ನಡದ ಕಂಪನ್ನು ಪಸರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಕನ್ನಡ ಶಾಲೆಗಳು ಸದೃಢವಾದರೆ ಮಾತ್ರ ನಮ್ಮ ಭಾಷೆಯ ಬೇರುಗಳು ಗಟ್ಟಿಯಾಗುತ್ತವೆ. ನಮ್ಮ ಮಕ್ಕಳು ಕನ್ನಡದ ಅಕ್ಷರಗಳೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಯಲಿ, ಮಾತೃಭಾಷೆಯ ಹೆಮ್ಮೆಯನ್ನು ಸಾರಲಿ.
ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಸಂಕುಚಿತ ಮನೋಭಾವವಲ್ಲ; ಅದು ನಮ್ಮ ಮೂಲವನ್ನು, ನಮ್ಮ ಅಸ್ಮಿತೆಯನ್ನು ಪ್ರೀತಿಸುವ ಹೆಮ್ಮೆಯ ಸಂಕೇತ. ಸರ್ಕಾರ, ಶಿಕ್ಷಕರು, ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿದರೆ ಕನ್ನಡ ಶಾಲೆಗಳು ಜ್ಞಾನದ ದೇಗುಲಗಳಾಗಿ ಮರುಜನ್ಮ ಪಡೆಯುತ್ತವೆ.
ಈ ಶೈಕ್ಷಣಿಕ ವರ್ಷವು ಕನ್ನಡದ ಜ್ಯೋತಿಯನ್ನು ಎಲ್ಲೆಡೆ ಬೆಳಗಿಸಲಿ.
ಶಾಲಾ ಪ್ರಾರಂಭೋತ್ಸವವು ಕೇವಲ ಶಾಲೆ ಆರಂಭವಾಗುವ ದಿನವಲ್ಲ; ಅದು ಹೊಸ ಕನಸುಗಳ ಹಬ್ಬವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯನ್ನು ಪ್ರೀತಿಸಬೇಕು. ಕಲಿಕೆಯನ್ನು ಹೊರೆ ಎಂದು ಭಾವಿಸದೆ, ಜೀವನದ ಬೆಳಕು ಎಂದು ಅರ್ಥಮಾಡಿಕೊಳ್ಳಬೇಕು.
“ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು” ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಪ್ರತಿಯೊಂದು ಮಗು ಉತ್ತಮ ಶಿಕ್ಷಣ ಪಡೆದು ದೇಶದ ಹೆಮ್ಮೆಯಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

– ಎಸ್.ಕೆ. ಆಡಿನ
ಶಿಕ್ಷಕರು, ಹೊಳೆಆಲೂರು



