ವಿಜಯಸಾಕ್ಷಿ ಸುದ್ದಿ, ಗದಗ: ಗದಗದಲ್ಲಿ ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಮೇ 31ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದರು.
ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ಕಾರ್ಯಕರ್ತರು ಸಮಾವೇಶದ ಉದ್ದೇಶ ಹಾಗೂ ಕಾರ್ಯಕ್ರಮದ ಕುರಿತು ಶ್ರೀಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಡಾ. ತೋಂಟದ ಸಿದ್ಧರಾಮ ಶ್ರೀಗಳು, ಮೇ 30ರಿಂದ ಎರಡು ದಿನಗಳ ಕಾಲ ಪೂರ್ವನಿಯೋಜಿತ ಕಾರ್ಯಕ್ರಮಗಳಿರುವುದರಿಂದ ಸಮಾವೇಶದಲ್ಲಿ ಭಾಗವಹಿಸಲು ಅನಾನುಕೂಲವಾಗುತ್ತಿದೆ ಎಂದು ತಿಳಿಸಿದರು. ಜೊತೆಗೆ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಅರವಿಂದ ಹುಲ್ಲೂರ, ಉಡಚಪ್ಪ ಹಳ್ಳಿಕೇರಿ, ಶ್ರೀನಿವಾಸ ಹುಬ್ಬಳ್ಳಿ, ಶ್ರೀಧರ ಕುಲಕರ್ಣಿ, ಮಾರುತಿ ಪವಾರ, ಡಾ. ಗಣೇಶ ಸುಲ್ತಾನಪುರ, ಶಿವಯೋಗಿ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



