ಗದಗ: ತಾಲೂಕಿನ ಕಣವಿಹೊಸೂರ ಗ್ರಾಮದ ಹೊರವಲಯದಲ್ಲಿ ಸ್ಥಾಪಿಸಲಾಗಿದ್ದ ಪವನ ವಿದ್ಯುತ್ ಯಂತ್ರದಲ್ಲಿ (ವಿಂಡ್‌ಮಿಲ್) ಏಕಾಏಕಿ ಬೆಂಕಿ ಕಾಣಿಸಿಕೊಂಡು, ಅದರ ರೆಕ್ಕೆಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡೆದಿದೆ.
ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಕ್ಷಣಾರ್ಧದಲ್ಲೇ ವಿಂಡ್‌ಮಿಲ್‌ನ ಮೇಲ್ಭಾಗಕ್ಕೆ ವ್ಯಾಪಿಸಿ ರೆಕ್ಕೆಗಳು ಸಂಪೂರ್ಣ ಸುಟ್ಟುಹೋಗಿವೆ.
ಘಟನೆ ನಡೆದ ವೇಳೆ ಜಮೀನಿನಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸಲಾಗುತ್ತಿದೆ.



