ಬೆಂಗಳೂರು: 2014ರಲ್ಲಿ ಬೆಂಗಳೂರಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ಎಂಟು ವಾರಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಗಡುವು ವಿಧಿಸಿದೆ.
ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಪೋಕ್ಸೊ ಪ್ರಕರಣಗಳು ಆದಷ್ಟು ಬೇಗ ಅಂತಿಮ ಹಂತ ತಲುಪಬೇಕು ಎಂದು ಕಾನೂನಿನ ಆಶಯವಾಗಿದೆ. ಇಂತಹ ಪ್ರಕರಣಗಳಲ್ಲಿ ಪದೇಪದೆ ವಿಚಾರಣೆಯನ್ನು ಮುಂದೂಡುವ ಪ್ರವೃತ್ತಿ ಖಂಡನೀಯವಾಗಿದ್ದು, ಉಭಯ ಪಕ್ಷಗಳು ವಿಚಾರಣಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಸೂಚಿಸಿದೆ.
ಪ್ರಕರಣವನ್ನು ಹಲವು ವರ್ಷಗಳ ಕಾಲ ವಿವಿಧ ನೆಪಗಳಲ್ಲಿ ಮುಂದೂಡಿರುವ ಕ್ರಮವನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಹಾಗೂ ಸೆಷನ್ಸ್ ನ್ಯಾಯಾಲಯ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ಬಾಲಕಿ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ್ದ ಹೇಳಿಕೆಯ ಪ್ರತಿಯಲ್ಲಿ ಬಾಲಕಿ ಹಾಗೂ ಮ್ಯಾಜಿಸ್ಟ್ರೇಟ್ ಅವರ ಸಹಿ ಇಲ್ಲ ಎಂಬ ಕಾರಣ ನೀಡಿ, ಸಂಬಂಧಿತ ಮ್ಯಾಜಿಸ್ಟ್ರೇಟ್‌ಗೆ ಸಮನ್ಸ್ ಜಾರಿಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: 2014ರ ಜುಲೈ 14ರಂದು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ತರಗತಿ ಮುಗಿದ ಬಳಿಕ ಆರು ವರ್ಷದ ಬಾಲಕಿಯ ಮೇಲೆ ಇಬ್ಬರು ತರಬೇತುದಾರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆಯ ಕಲಂ 376, 202 ಹಾಗೂ ಪೋಕ್ಸೊ ಕಾಯ್ದೆಯ ಕಲಂ 4, 6 ಮತ್ತು 21ರ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಶಾಲಾ ಆವರಣಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಡ್ಡಾಯ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.



