ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಕೆಲವು ದಿನಗಳ ಹಿಂದೆ ಸುರಿದ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂನ ಒಳಹರಿವು 12 ಸಾವಿರ ಕ್ಯೂಸೆಕ್ ಗಡಿ ದಾಟಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಜುಲೈ 13ರಂದು ಒಳಹರಿವು 7,500 ಕ್ಯೂಸೆಕ್‌ಗೆ ಇಳಿದಿತ್ತು. ಇದೀಗ ಮತ್ತಷ್ಟು ಕುಸಿತ ಕಂಡಿದ್ದು, ಜಲಾಶಯಕ್ಕೆ ಕೇವಲ 3,685 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 92.54 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 17.509 ಟಿಎಂಸಿ ಅಡಿ ನೀರಿದೆ.
ಕುಡಿಯುವ ನೀರಿನ ಅಗತ್ಯಕ್ಕಾಗಿ ಸದ್ಯ 623 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯದ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.



